ಹೊಸದಿಗಂತ ವರದಿ, ಮಡಿಕೇರಿ:
ಚುನಾವಣೆಗಳಲ್ಲಿ ಅಭ್ಯರ್ಥಿಯ ಆಯ್ಕೆ ಸಂದರ್ಭ ಯಾವುದೇ ತಾರತಮ್ಯವನ್ನು ತೋರದೆ ಅರ್ಹರನ್ನು ಕಣಕ್ಕಿಳಿಸಬೇಕು ಮತ್ತು ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಸಮಿತಿ ಸದಸ್ಯ ಹಾಗೂ ಕೊಡಗು ಉಸ್ತುವಾರಿ ಪ್ರೇಮ್ ಕುಮಾರ್ ಪದಾಧಿಕಾರಿಗಳಿಗೆ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಎಸ್ಟಿ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸಲು ಮನವಿ ಸಲ್ಲಿಸಲಾಗುವುದು. ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಜಾಗ ನೀಡುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಕಾರ್ಯಕರ್ತರು ಪಕ್ಷದ ಏಳಿಗೆಗಾಗಿ ಶ್ರಮಿಸಬೇಕು. ಚುನಾವಣೆ ಸಂದರ್ಭ ಅಭ್ಯರ್ಥಿಗಳ ಆಯ್ಕೆಯನ್ನು ಗೊಂದಲಮಯಗೊಳಿಸಬಾರದು. ಗ್ರಾಮ ಮಟ್ಟದಿಂದ ಕಾರ್ಯಕರ್ತರ ತಂಡವನ್ನು ಸದೃಢಗೊಳಿಸಬೇಕು ಎಂದು ಸಲಹೆ ನೀಡಿದರು.
ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಮಿಟ್ಟು ರಂಜಿತ್ ಮಾತನಾಡಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗುವ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು. ಎಲ್ಲೂ ಅಭಿಪ್ರಾಯ ಭೇದವಿಲ್ಲದೆ ಪಕ್ಷ ಸಂಘಟಿಸಬೇಕು ಎಂದು ತಿಳಿಸಿದರು.
ಮತಾಂತರಗೊಳ್ಳುವವರಿಗೆ ಸರ್ಕಾರದ ಸೌಲಭ್ಯ ನೀಡದಂತೆ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಹಾಸನ ಜಿಲ್ಲಾ ಉಸ್ತುವಾರಿ ಬಿ.ಕೆ.ಮೋಹನ್, ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಪರಮೇಶ್ವರ್ ಕೆದಮಳ್ಳೂರು, ಪ್ರಭಾಕರ್, ಜಿ.ಪಂ ಸದಸ್ಯೆ ಕೆ.ಆರ್.ಮಂಜುಳಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿ ಕಾಳಪ್ಪ, ಮಾದಪ್ಪ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.