ಯಾರೂ ಶಾಶ್ವತವಾಗಿ ಉಳಿಯಲೂ ಸಾಧ್ಯವಿಲ್ಲ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸುಳಿವುಕೊಟ್ಟ ಗಂಗೂಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನದಿಂದ ಹೊರಗುಳಿಯುತ್ತಿದ್ದು, ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳುತ್ತಿದ್ದು, ಈ ಬಗ್ಗೆ ಗಂಗೂಲಿ ಅವರು ಗುರುವಾರ ಕಾರ್ಯಕ್ರಮವೊಂದರಲ್ಲಿ ಮೌನ ಮುರಿದಿದ್ದಾರೆ.

ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಹಾಗೆಯೇ ಶಾಶ್ವತವಾಗಿ ಆಡಳಿತದಲ್ಲಿ ಉಳಿಯಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಾನು ಐದು ವರ್ಷಗಳ ಕಾಲ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷನಾಗಿದ್ದೆ. ಬಹು ದಿನಗಳ ಕಾಲ ಬಿಸಿಸಿಐ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ. ಈಗ ಅನಿವಾರ್ಯ ಕಾರಣಗಳಿಂದ ಬೇರೆ ಪಯಣ ಮಾಡುವ ಸಮಯ ಬಂದಿದೆ ಎಂದು ತಮ್ಮ ಅಧಿಕಾರ ತ್ಯಾಗದ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ.

ಎಲ್ಲ ಷರತ್ತುಗಳ ನಂತರವೂ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷನಾಗಿ ಹಾಗೂ ಬಿಸಿಸಿಐ ಅಧ್ಯಕ್ಷನಾಗಿ ನನ್ನ ಅಧಿಕಾರವನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ನಿರ್ವಾಹಕರಾಗಿ ಜೊತೆಗೆ ಓರ್ವ ಅಧಿಕಾರಿಯಾಗಿ ನೀವು ಒಂದು ಸಂಸ್ಥೆಗಾಗಲಿ ಅಥವಾ ಒಂದು ತಂಡಕ್ಕಾಗಲಿ ಸಾಕಷ್ಟು ಕೊಡುಗೆ ನೀಡುವುದು ನಿಮ್ಮ ಕರ್ತವ್ಯವಾಗಿರುತ್ತದೆ. ಆದರೆ, ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ. ಜೊತೆಗೆ ಶಾಶ್ವತವಾಗಿ ಆಡಳಿತದಲ್ಲಿ ಉಳಿಯಲು ಸಹ ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ಭಾರತದ ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಬಿಸಿಸಿಐ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ ಮತ್ತು ಅರುಣ್ ಧುಮಾಲ್ ಬದಲಿಗೆ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಖಜಾಂಚಿಯಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ. ಜಯ್ ಶಾ ಬಿಸಿಸಿಐ ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ.

ಜಸ್ಟಿಸ್‌ ಲೋಧಾ ಸಮಿತಿಯ ಶಿಫಾರಸಿನ ಅನುಗುಣವಾಗಿ ಅಧ್ಯಕ್ಷ ಸ್ಥಾನದಲ್ಲಿ ಸತತ ಎರಡನೇ ಅವಧಿಯಲ್ಲಿ ಮುಂದುವರಿಯುವ ಹಾಗಿಲ್ಲ. ಆದರೆ, ಈ ಬಗ್ಗೆ ಸುಪ್ರೀಂ ಮೊರೆ ಹೋಗಿದ್ದ ಬಿಸಿಸಿಐ ನಿಯಮಗಳಲ್ಲಿ ಕೊಂಚ ಬದಲಾವಣೆಗಳನ್ನು ತಂದು ಎರಡನೇ ಅವಧಿಗೆ ಆಯ್ಕೆ ಮಾಡಲು ಗ್ರೀನ್‌ ಸಿಗ್ನಲ್‌ ಪಡೆದಿತ್ತು.ಇದರ ಪರಿಣಾಮ ಕಾರ್ಯದರ್ಶಿ ಸ್ಥಾನದಲ್ಲಿ ಜಯ ಶಾ ಮುಂದುವರಿಯಲಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬೇಕಾದ ಬೆಂಬಲ ಸಿಗದ ಕಾರಣ ಸೌರವ್‌ ಕೆಳಗಿಳಿಯುವಂತಾಗಿದೆ.
ಅ. 18ರಂದು ಸೌರವ್ ಗಂಗೂಲಿ ಅವರ ಅಧಿಕಾರ ಅವಧಿ ಅಂತ್ಯಗೊಳ್ಳಲಿದ್ದು, ಮಾಜಿ ಆಲ್‌ರೌಂಡರ್‌ ರೋಜರ್‌ ಬಿನ್ನಿ ಈ ಹುದ್ದೆ ಅಲಂಕರಿಸುವುದು ಬಹುತೇಕ ಖಾತ್ರಿಯಾಗಿದೆ.
ಹಿರಿಯ ಬಿಸಿಸಿಐ ಆಡಳಿತಾಧಿಕಾರಿ ರಾಜೀವ್ ಶುಕ್ಲಾ ಮಂಡಳಿಯ ಉಪಾಧ್ಯಕ್ಷರಾಗಿ ಉಳಿಯಲಿದ್ದು, ಅರುಣ್ ಧುಮಾಲ್ ಬದಲಿಗೆ ಆಶಿಶ್ ಶೆಲಾರ್ ಹೊಸ ಖಜಾಂಚಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ BCCI ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಬಿನ್ನಿ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!