ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕೇಳಿ ಬಂದಿರುವ ಶಬ್ದದ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ
ಇಂದು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಹೆಮ್ಮಿಗೆಪುರ, ಕಗ್ಗಲೀಪುರ, ಕೆಂಗೇರಿ, ಆರ್.ಆರ್ ನಗರ ಮುಂತಾದ ಕಡೆಗಳಲ್ಲಿ ಶಬ್ದ ಹಾಗೂ ಸಣ್ಣ ಪ್ರಮಾಣದ ಭೂ ಕಂಪನ ಕಂಡು ಬಂದಿದೆ.
ಈ ಕುರಿತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ತಜ್ಞರಿಂದ ವರದಿ ಪಡೆದ ಸಚಿವರು, ಇದು ಭೂಕಂಪನದ ಯಾವುದೇ ಮುನ್ಸೂಚನೆ ಅಲ್ಲ ಎಂದು ತಿಳಿಸಿದ್ದಾರೆ.
ನಾನು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಚಿವರು ತಿಳಿಸಿದ್ದಾರೆ.
ಇಂದು 11.50 ರಿಂದ 12.15ರ ಮಧ್ಯದಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು, ಜನರು ಆತಂಕ ವ್ಯಕ್ತಪಡಿಸಿದ್ದರು. ಸರ್ಕಾರ ಕೂಡಲೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.