ಭಾರತ ಆರ್ಥಿಕ ಹಿಂಜರಿತಕ್ಕೆ ಗುರಿಯಾಗುವ ಪ್ರಶ್ನೆಯೇ ಇಲ್ಲ: ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಭಾರತ ಆರ್ಥಿಕ ಹಿಂಜರಿತಕ್ಕೆ ಗುರಿಯಾಗುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಸಾರಿ ಹೇಳಿದ್ದಾರೆ. ವಿಶ್ವವಿಂದು ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದ್ದು, ಜಗತ್ತಿನ ದೇಶಗಳೆಲ್ಲ ಇದರಿಂದ ತೀವ್ರ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದ್ದರೂ , ವಿಶ್ವದ ಬಹುತೇಕ ದೇಶಗಳಿಗಿಂತ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ನಿರ್ಮಲಾ ವಿಶ್ವಾಸಪೂರ್ಣವಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಅವರ ಉತ್ತರಕ್ಕೆ ತೃಪ್ತಿಗೊಳ್ಳದ ಕಾಂಗ್ರೆಸ್ ಗಲಾಟೆಯೆಬ್ಬಿಸಿ ಸಭಾತ್ಯಾಗ ನಡೆಸಿತು.

ಕೊರೋನಾ ಸೋಂಕಿಗೆ ಸಿಲುಕಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುಣಮುಖರಾಗಿ ಬಂದ ಕೂಡಲೇ ಬೆಲೆ ಏರಿಕೆ ವಿಷಯದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಿಕೊಡುವುದಾಗಿ ಸರಕಾರ ಹೇಳಿದ್ದರೂ , ಸರಕಾರ ಬೆಲೆ ಏರಿಕೆ ವಿಷಯ ಚರ್ಚಿಸಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಸೇರಿದಂತೆ ಕಳೆದ 10 ದಿನಗಳಿಂದ ವಿವಿಧ ನೆವಗಳನ್ನು ಮುಂದೊಡ್ಡಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸದನದ ಕಲಾಪಕ್ಕೆ ತಡೆಯೊಡ್ಡುತ್ತಾ ಬಂದಿದ್ದವು. ಸೋಮವಾರ ನಿರ್ಮಲಾ ಅವರು ಸದನಕ್ಕೆ ಹಾಜರಾಗಿದ್ದು, ಬೆಲೆ ಏರಿಕೆ ವಿಷಯದ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಕಲ್ಪಿಸಿಕೊಟ್ಟಿದ್ದರು.

ಈ ಸಂದರ್ಭ ಕಾಂಗ್ರೆಸ್ ಮತ್ತು ಇತರ ಕೆಲವು ವಿಪಕ್ಷ ಸದಸ್ಯರು ಬೆಲೆ ಏರಿಕೆ ವಿಷಯವನ್ನು ಪ್ರಸ್ತಾವಿಸಿ ಸರಕಾರವನ್ನು ತರಾಟೆಗೆತ್ತಿಕೊಂಡರು. ಬೆಲೆಗಳು ಒಂದೇ ಸವನೆ ಏರುತ್ತಿದ್ದು, ಸರಕಾರ ತನ್ನ ಪ್ರಜೆಗಳನ್ನು ಬಿಟ್ಟು ಬೇರೆ ದೇಶಗಳಿಗೆ ಸಹಾಯ ಮಾಡಲು ಹೊರಟಿದೆ ಎಂದೂ ಆರೋಪಿಸಿದರು. ಇಲ್ಲಿನ ಜನರನ್ನು ಬಿಟ್ಟು ಬೇರೆ ದೇಶಗಳಿಗೆ ಸಹಾಯ ಮಾಡಲು ಸರಕಾರ ಹೊರಟಿದೆ ಎಂದು ಕಾಂಗ್ರೆಸ್‌ನ ಅರ್ ರಂಜನ್ ಚೌಧರಿ ಆರೋಪಿಸಿದರು. ಶ್ರೀಲಂಕಾಕ್ಕೆ ಭಾರತ ನೀಡುವ ನೆರವನ್ನು ಉಲ್ಲೇಖಿಸಿ ಚೌಧರಿ ಇಂತಹ ಆರೋಪ ಮಾಡಿದರು.

ಈ ಸಂದರ್ಭ ಉತ್ತರಿಸಿದ ನಿರ್ಮಲಾ ಅವರು, ಕೋವಿಡ್ ಸಂಕಷ್ಟವನ್ನು ನಮ್ಮ ದೇಶದ ಜನತೆ ಎದುರಿಸಿದ ರೀತಿಯನ್ನು ನಾವು ಶ್ಲಾಘಿಸಬೇಕಾಗಿದೆ.ಈಗ ಜಾಗತಿಕ ಪೂರೈಕೆ ಸರಪಣಿ ಮತ್ತು ಮೌಲ್ಯ ಸರಪಣಿಗೆ ತೀವ್ರ ಧಕ್ಕೆ ಉಂಟಾಗಿದೆ.ಆದರೂ ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಕೈಗೊಂಡ ಕ್ರಮಗಳಿಂದಾಗಿ ಭಾರತವಿಂದು ವಿಶ್ವದ ಇತರ ಬಹುತೇಕ ದೇಶಗಳಿಂದ ಉತ್ತಮ ಸ್ಥಿತಿಯಲ್ಲಿರುವಂತಾಗಿದೆ . ವಿವಿಧ ಜಾಗತಿಕ ಏಜೆನ್ಸಿಗಳ ವರದಿಯೇ ಇದಕ್ಕೆ ಸಾಕ್ಷಿ ಎಂದು ಒತ್ತಿ ಹೇಳಿದರು.

ಇಂದು ವಿವಿಧ ಜಾಗತಿಕ ಏಜೆನ್ಸಿಗಳು ನೀಡಿರುವ ವರದಿಗಳನ್ನು ಗಮನಿಸಬೇಕು.ಪ್ರತಿಬಾರಿಯೂ ಜಾಗತಿಕ ಬೆಳವಣಿಗೆ ಕುಂಠಿತವಾದ ವೇಳೆ, ಭಾರತದ ಬೆಳವಣಿಗೆ ದರವನ್ನೂ ತಗ್ಗಿಸಲಾಗುತ್ತಿತ್ತು. ಆದರೆ ಇದರ ಹೊರತಾಗಿಯೂ ಭಾರತ ಇಂದು ವಿಶ್ವದ ಅತ್ಯಂತ ವೇಗದ ಬೆಳವಣಿಗೆ ಹೊಂದುತ್ತಿರುವ ದೇಶವೆಂಬುದನ್ನು ಅವು ಗುರುತಿಸಿವೆ. ವಿಶ್ವದ ಎಲ್ಲ ದೇಶಗಳೂ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದ್ದರೂ, ಭಾರತ ಈ ಹಿಂಜರಿತದಿಂದ ಪಾರಾಗಲಿದೆ ಎಂಬುದಾಗಿ ಈ ಏಜೆನ್ಸಿಗಳು ವರದಿ ನೀಡಿರುವುದನ್ನು ನಿರ್ಮಲಾ ಅವರು ಸದನದಲ್ಲಿ ವಿವರಿಸಿದರು. ಭಾರತ ಆರ್ಥಿಕ ಹಿಂಜರಿತಕ್ಕೆ ಗುರಿಯಾಗುವ ಅಥವಾ ಆರ್ಥಿಕ ನಿಶ್ಚಲತೆಗೆ ಗುರಿಯಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.ಕಳೆದ 5 ತಿಂಗಳುಗಳಲ್ಲಿ ದೇಶದಲ್ಲಿ ಜಿಎಸ್‌ಟಿ ಸಂಗ್ರಹ ನಿರಂತರವಾಗಿ 1.49 ಲ.ಕೋ.ರೂ.ಗಳಿಗಿಂತ ಮೇಲಿರುವುದನ್ನು ಅವರು ಬೊಟ್ಟು ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!