Thursday, August 11, 2022

Latest Posts

ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪನೆ: 37948 ಕುಟುಂಬಗಳಿಗೆ ವಿವಿಧ ಸೌಲಭ್ಯಕ್ಕೆ ಪ್ರಸ್ತಾವನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಅಲೆಮಾರಿ ಜನಾಂಗವು ಹೆಚ್ಚಿದ್ದು 640 ಜನವಸತಿ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. 37948
ಕುಟುಂಬಗಳಿಂದ 1.79 ಲಕ್ಷ ಜನಸಂಖ್ಯೆ ಇದೆ. ಇವರ ಅಭಿವೃದ್ದಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಲೆಮಾರಿ ಅರೆ ಅಲೆಮಾರಿ ಜನಾಂಗದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಲೆಮಾರಿ ಜನಾಂಗವು ಪ್ರ.ವರ್ಗ-1ರಲ್ಲಿ ಬರುವ ಒಟ್ಟು 96 ವಿವಿಧ ಜಾತಿಗಳಲ್ಲಿ 42 ಜಾತಿಗಳನ್ನು ಅಲೆಮಾರಿ ಜನಾಂಗ ಎಂದು ಗುರುತಿಸಿ ಇವರ ಅಭಿವೃದ್ದಿಗಾಗಿ ಈ ವರ್ಷದಿಂದ ಪ್ರತ್ಯೇಕ ಅಭಿವೃದ್ದಿ ನಿಗಮದ ಸ್ಥಾಪಿಸಿದೆ ಎಂದರು.
ಈ ಜನರ ಮಕ್ಕಳ ಶೈಕ್ಷಣಿಕ ಅಭಿವೃದ್ದಿ, ವಿದ್ಯಾರ್ಥಿವೇತನ ಹಾಗೂ ಹಾಸ್ಟೆಲ್ ಸೌಲಭ್ಯ ಹಾಗೂ ಉನ್ನತ ಶಿಕ್ಷಣಕ್ಕೆ ಅರಿವು ಕಾರ್ಯಕ್ರಮದಡಿ ಸಾಲ, ಸೌಲಭ್ಯವನ್ನು ಒದಗಿಸುತ್ತಿದೆ. ಈಗಾಗಲೇ ಚಿತ್ರದುರ್ಗದಲ್ಲಿ ಪ್ರತ್ಯೇಕ ೩ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗಿದ್ದು ಶೇ ೭೫ ರಷ್ಟು ಸ್ಥಾನವನ್ನು ಈ ಜನರ ಮಕ್ಕಳಿಗೆ ನೀಡಲಾಗುತ್ತಿದೆ. ಆದರೂ ಸಹ ಹಾಸ್ಟೆಲ್‌ಗೆ ಸಾಕಷ್ಟು ಬೇಡಿಕೆ ಇದ್ದು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ವಸತಿಯಡಿ ಅಲೆಮಾರಿ ಜನರಿಗೆ ಮನೆಗಳನ್ನು ನೀಡಲಾಗುತ್ತಿದ್ದು, ಜಿಲ್ಲೆಗೆ 12 ಸಾವಿರ ಮನೆಗಳ ಪ್ರಸ್ತಾವನೆಯಲ್ಲಿ ಈಗಾಗಲೇ ಹಿರಿಯೂರು ತಾಲ್ಲೂಕಿಗೆ ೪೪೪೮ ಹಾಗೂ 2796 ಮೊಳಕಾಲ್ಮುರು ತಾಲ್ಲೂಕಿಗೆ ಅಲೆಮಾರಿಗಳ ವಸತಿ ಸೌಲಭ್ಯಕ್ಕಾಗಿ ಮನೆಗಳು ಮಂಜೂರಾಗಿವೆ. ಉಳಿದ ತಾಲ್ಲೂಕುಗಳಿಗೂ ಮಂಜೂರಾಗಬೇಕಾಗಿದ್ದು, ಈ ಸೌಲಭ್ಯ ಪಡೆಯಲು ಬೇರಾವುದೇ ಯೋಜನೆಯಡಿ ವಸತಿ ಸೌಲಭ್ಯ ಪಡೆದಿರಬಾರದು ಎಂದರು.
ಅಲೆಮಾರಿ ಜನರು ವಾಸಿಸುವ ಗ್ರಾಮ, ಕಾಲೋನಿಗಳು, ಹಟ್ಟಿಗಳಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. 2019-20 ರಲ್ಲಿ 3.5 ಕೋಟಿ, 2020-21 ರಲ್ಲಿ 4.5 ಕೋಟಿ ಮಂಜೂರಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಅಲೆಮಾರಿ ಜನಾಂಗದವರಿಗೆ ಭೂ ಒಡೆತನ ಒದಗಿಸಲಾಗುತ್ತದೆ. ಗಂಗಾ ಕಲ್ಯಾಣದಡಿ ಕೊಳವೆಬಾವಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅವಿನ್, ಅಲೆಮಾರಿ ಜನಾಂಗದ ಅಭಿವೃದ್ದಿ ಹಾಗೂ ಸಮಿತಿ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಮಾಹಿತಿ ನೀಡಿದರು. ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಎಎಸ್‌ಪಿ ನಂದಗಾವಿ, ಡಿ.ದೇವರಾಜ ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss