ಉತ್ತರ ಕೊರಿಯಾದಿಂದ ಕ್ಷಿಪಣಿ ಪ್ರಯೋಗ: ದಕ್ಷಿಣ ಕೊರಿಯಾ ಸೇನೆ ತೀವ್ರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕೊರಿಯಾ ಭಾನುವಾರ ಅಲ್ಪ ವ್ಯಾಪ್ತಿಯ ಕ್ಷಿಪಣಿಯನ್ನು ಹಾರಿಸಿದ್ದಾಗಿ ದಕ್ಷಿಣ ಕೊರಿಯಾ ಸೇನೆ ಬಹಿರಂಗಪಡಿಸಿದೆ. ಪಶ್ಚಿಮ ಒಳನಾಡಿನ ಪಟ್ಟಣವಾದ ಟೇಕ್ವಾನ್‌ನಿಂದ ಉಡಾವಣೆಯಾದ ಕ್ಷಿಪಣಿಯು ಉತ್ತರ ಕೊರಿಯಾದ ಪೂರ್ವ ಕರಾವಳಿಯ ಬಳಿ ಸಮುದ್ರಕ್ಕೆ ಬೀಳುತ್ತಿರುವುದನ್ನು ಗುರುತಿಸಲಾಗಿದೆ. ಗರಿಷ್ಠ 60 ಕಿ.ಮೀ ಎತ್ತರದಲ್ಲಿ ಹಾರಿ ಸುಮಾರು 600 ಕಿ.ಮೀ ದೂರದಲ್ಲಿ ಬಿದ್ದಿದೆ ಎಂದು ಹೇಳಿದೆ. ಉತ್ತರ ಕೊರಿಯಾದ ಉಡಾವಣೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಖಂಡಿಸಿದೆ.

ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯು ಕೊರಿಯನ್ ಪೆನಿನ್ಸುಲಾ ಮತ್ತು ಅಂತರರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡುವ ಗಂಭೀರ ಪ್ರಚೋದನೆಯಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಅಮೆರಿಕದ ಪರಮಾಣು ಶಕ್ತಿಯನ್ನು ದಕ್ಷಿಣ ಕೊರಿಯಾ ಜತೆಗಿನ ಜಂಟಿ ಸಮರಾಭ್ಯಾಸಕ್ಕೆ ಬಳಸಿಕೊಳ್ಳಲಾಗುವುದು ವಿಮಾನವಾಹಕ ನೌಕೆ ರೊನಾಲ್ಡ್ ರೇಗನ್ ಕೊರಿಯನ್ ಪೆನಿನ್ಸುಲಾದ ಬುಸಾನ್ ಬಂದರಿಗೆ ಬಂದಿದೆ. ಅದೇ ಸಮಯದಲ್ಲಿ ಉತ್ತರ ಕೊರಯಾದ ಕ್ಷಿಪಣಿ ಪರೀಕ್ಷೆ ನಡೆಸಿರುವುದು ಗಮನಾರ್ಹ. ಇನ್ನು ಕೆಲವೇ ದಿನಗಳಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಲಿದ್ದಾರೆ.

ಮತ್ತೊಂದೆಡೆ, ಜಪಾನ್ ಕೋಸ್ಟ್ ಗಾರ್ಡ್ ಕೂಡ ಈ ಕ್ಷಿಪಣಿ ಪರೀಕ್ಷೆಯನ್ನು ಖಚಿತಪಡಿಸಿದೆ. ಜಪಾನ್‌ನ ವಿಶೇಷ ಆರ್ಥಿಕ ವಲಯದ ಹೊರಗೆ ಉತ್ತರ ಕೊರಿಯಾದ ಪೂರ್ವ ಕರಾವಳಿಯ ಬಳಿ ಕ್ಷಿಪಣಿ ಬಿದ್ದಿದೆ ಎಂದು ಜಪಾನಿನ ರಕ್ಷಣಾ ಸಚಿವ ಯಸುಕಾಜು ಹಮಡಾ ಈ ವಿಷಯದ ಕುರಿತು ಹೇಳಿದ್ದಾರೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಯು ಗಂಭೀರ ಪ್ರಚೋದನೆಯ ಕೃತ್ಯ ಎಂದು ಸಿಯೋಲ್‌ನ ಮೂಲಗಳು ಆರೋಪಿಸಿವೆ. ತನ್ನ ಮಿಲಿಟರಿಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿರುವುದಾಗಿ ದಕ್ಷಿಣ ಕೊರಿಯಾ ಹೇಳಿದ್ದು,  ಅಮೆರಿಕದೊಂದಿಗಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲಾಗುವುದೆಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!