Friday, September 29, 2023

Latest Posts

ಅಂಬಾನಿ-ಅದಾನಿ ಮಾತ್ರವಲ್ಲ, ಜನಸಾಮಾನ್ಯರ ಜೇಬಲ್ಲಿ ಹಣವಿದ್ದರೆ ಮಾತ್ರ ಆರ್ಥಿಕಾಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇವಲ ಅಂಬಾನಿ-ಅದಾನಿಯಂತಹ ವ್ಯವಹಾರಸ್ಥರಲ್ಲದೇ ತಿಮ್ಮ, ಬೋರ ಹಾಗೂ ಕಾಳನಂತಹ ಜನಸಾಮಾನ್ಯರ ಜೇಬಿನಲ್ಲೂ ಹಣವಿದ್ದಲ್ಲಿ ಆರ್ಥಿಕ ಸ್ಥಿತಿ ಬೆಳವಣಿಗೆ ಮತ್ತು ಮಧ್ಯಮ ವರ್ಗ ಅಭಿವೃದ್ಧಿಗೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಿ. ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಕರ್ನಾಟಕ ಆದಿಜಾಂಬವರ ಸಾಂಸ್ಕೃತಿಕ ಸಮಿತಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ದಿ.ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟನೆ ಹಾಗೂ ಸಿದ್ದಲಿಂಗಯ್ಯ ಪುತ್ಥಳಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ದುಡಿಯುವವರು, ಶ್ರಮಿಕರಲ್ಲಿ ಹಣವಿದ್ದರೆ ದೇಶದ ಆರ್ಥಿಕತೆಯ ಬೆಳವಣಿಗೆ ಆಗುತ್ತದೆ. ಆದರೆ, ಕೇವಲ ಅಂಬಾನಿ, ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ ಎಂದರು.

ದೇಶದ ಆರ್ಥಿಕ ಸ್ಥಿತಿ ಬೆಳೆಯಬೇಕೆಂಬ ಕಾರಣದಿಂದ ನಮ್ಮ ಸರ್ಕಾರ ಶ್ರಮಿಕ ವರ್ಗದ ಜೇಬಿಗೆ ಹಣ ಹಾಕುವ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಜಾರಿ ಮಾಡಿದೆ. ಈ ಮೂಲಕ ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದ್ದೇವೆ. ಇದರಿಂದ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಸಿಎಂ ಶಿಕ್ಷಣ ಕಥನ ಪುಸ್ತಕ ಬಿಡುಗಡೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜನಚಳವಳಿಗಳ ಉತ್ಪತ್ತಿ, ಬಜೆಟ್​ನಲ್ಲಿ ಕೊಟ್ಟಿರುವ ಕಾರ್ಯಕ್ರಮಗಳು, ದಲಿತರ ಪರವಾದ ಕಾಯ್ದೆ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ. ಅವರು ಸಂವಿಧಾನದ ನಿಜವಾದ ರಕ್ಷಕರು ಎಂದರು.

ಮಾಜಿ ಸಚಿವ ಹೆಚ್.ಆಂಜನೇಯ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಎಸ್.ಜಿ ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ , ಹಿರಿಯ ಪತ್ರಕರ್ತ ರವೀಂದ್ರ ಭಟ್, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಇಂದಿರಾ ಕೃಷ್ಣಪ್ಪ, ಪ್ರೊ.ಜಾಫೆಟ್, ಡಾ.ಮಾನಸ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!