ಹೊಸದಿಗಂತ ಆನ್ ಲೈನ್ ಡೆಸ್ಕ್:
ಎಲ್ಲಾ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಉದ್ದೇಶಿತ ಖಾಸಗೀಕರಣ ವಿರೋಧಿಸಿ ಒಂಬತ್ತು ಯೂನಿಯನ್ ಕರೆ ನೀಡಿರುವ ಎರಡು ದಿನಗಳ ಬ್ಯಾಂಕಿಂಗ್ ಮುಷ್ಕರದ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಬ್ಯಾಂಕ್ ಗಳ ಮೂಲಕ ದೇಶದ ಆಶೋತ್ತರಗಳನ್ನು ಈಡೇರಿಸಲಾಗುವುದು. ಜೊತೆಗೆ ನೌಕರರ ಹಿತಾಸಕ್ತಿಯನ್ನು ರಕ್ಷಿಸುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಉದ್ಯಮ ನೀತಿಯೊಂದನ್ನು ಘೋಷಿಸಲಾಗಿದ್ದು, ನಾಲ್ಕು ಕ್ಷೇತ್ರಗಳನ್ನು ಗುರುತಿಸಿದ್ದೇವೆ. ಸಾರ್ವಜನಿಕ ವಲಯ, ಹಣಕಾಸು ವಲಯ ಕೂಡಾ ಅಲ್ಲಿದೆ. ಎಲ್ಲಾ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುತ್ತಿಲ್ಲ ಎಂದರು.
ಖಾಸಗೀಕರಣಗೊಳ್ಳುವ ನಿರೀಕ್ಷೆಯಲ್ಲಿರುವ ಬ್ಯಾಂಕ್ ನೌಕರರ ಸಂಬಳ, ಪಿಂಚಣಿ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಹಿತಾಸಕ್ತಿಯನ್ನು ಕಾಪಾಡುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.