ಹೊಸದಿಗಂತ ಆನ್ ಲೈನ್ ಡೆಸ್ಕ್:
ಆರು ತಿಂಗಳು ಕಲ್ಯಾಣ ಮಂಟಪ ಮುಚ್ಚಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ಇಂದಿನಿಂದ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುವುದು. ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಬೆಂಗಳೂರು ದಕ್ಷಿಣ ವಲಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಯ ಉಸ್ತುವಾರಿಯೂ ಆಗಿರುವ ಅಶೋಕ್ ಅವರು ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಕೃಷ್ಣಪ್ಪ, ಬಿಬಿಎಂಪಿ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರಮುಖರ ಜೊತೆ ಶನಿವಾರ ಸಭೆ ನಡೆಸಿದರು.
ಕೊರೋನಾ ಸೋಂಕಿತರು ಭಯಭೀತ ಆಗಬೇಡಿ, ಸೋಂಕಿತರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ, ಉತ್ತಮ ಚಿಕಿತ್ಸೆ ನೀಡಲಾಗುವುದು. ಹೋಮ್ ಐಸೋಲೇಷನ್ ಆದವರಿಗೆ ಸೀಲ್ ಹಾಕಬೇಕೇ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸೋಂಕಿನಿಂದ ಸಾವಿನ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಜನ ನಿರ್ಲಕ್ಷ್ಯ ವಹಿಸಬಾರದು. ಜೀವ ಉಳಿದರೆ ಹಬ್ಬ ಮಾಡಬಹುದು ಎಂದೂ ಸಲಹೆ ನೀಡಿದರು.
ಕೊರೋನಾ ಕರ್ಫ್ಯೂ ಕುರಿತು ಟೀಕಿಸಿದ ವಿರೋಧ ಪಕ್ಷ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ‘ಪ್ರತಿಯೊಂದರಲ್ಲೂ ವಿರೋಧ ಮಾಡಲು ವಿರೋಧ ಪಕ್ಷಗಳು ಹೊರಟಿವೆ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರ ಇದೆ. ಅಲ್ಲಿ ಲಾಕ್ ಡೌನ್ ಏಕೆ ಹೇರಿದ್ದಾರೆ. ಇದು ವಿರೋಧ ಪಕ್ಷಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.