ಹೊಸದಿಗಂತ ಆನ್ಲೈನ್ ಡೆಸ್ಕ್:
ಇತ್ತೀಚೆಗಷ್ಟೇ ನಾಸಾದ ರೋವರ್ ಮಂಗಳ ಗ್ರಹದ ಮೇಲ್ಮೈಮೇಲೆ ಸಾಫ್ಟ್ಲ್ಯಾಂಡ್ ಆದ ಹಿಂದೆ ಭಾರತೀಯ ಮೂಲದ ವಿಜ್ಞಾನಿ ಸ್ವಾತಿ ಮೋಹನ್ ಪ್ರಮುಖ ಪಾತ್ರನಿರ್ವಹಿಸಿದ್ದರು ಎಂದು ತಿಳಿದುಬಂದಿರುವ ಬೆನ್ನಲ್ಲೇ, ಅನಿವಾಸಿ ಭಾರತೀಯರ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡನ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಎನ್ಆರ್ಐಗಳೇ ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.
ನಾಸಾ ವಿಜ್ಞಾನಿಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ಮಾತನಾಡಿ, ನಿಜಾರ್ಥದಲ್ಲಿ ಇಂದು ಅನಿವಾಸಿ ಭಾರತೀಯರು ಅಮೆರಿಕವನ್ನು ಮುನ್ನಡೆಸುತ್ತಿದ್ದಾರೆ. ಅದು ವಿಜ್ಞಾನಿ ಸ್ವಾತಿ ಮೋಹನ್ ಇರಬಹುದು, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇರಬಹುದು ಅಥವಾ ನನ್ನ ಭಾಷಣ ರಚನೆಕಾರ ವಿನಯ್ ರೆಡ್ಡಿ ಇರಬಹುದು. ಅಮೆರಿಕಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬ ಅನಿವಾಸಿ ಭಾರತೀಯರಿಗೂ ನಾನು ಧನ್ಯವಾದ ಎಂದು ಹೇಳಿದ್ದಾರೆ.
ಇನ್ನು ನಾಸಾದ ೨೦೨೦ನೇ ಮಂಗಳಯಾನ ಮಾರ್ಗದರ್ಶನ, ನಿಯಂತ್ರಣ ಕಾರ್ಯಾಚರಣೆಯ ಉಸ್ತುವಾರಿಯನ್ನು ಭಾರತೀಯ ಮೂಲದ ಸ್ವಾತಿ ಮೋಹನ್ ಹೊತ್ತಿದ್ದಾರೆ. ಮಂಗಳದ ಮೇಲೆ ರೋವರ್ ಲ್ಯಾಂಡ್ ಆಗಿದ್ದನ್ನು ಸಹ ಸ್ವಾತಿ ಮೊದಲು ಖಚಿತಪಡಿಸಿದ್ದರು.
ಬೈಡನ್ ಕೇವಲ ತಮ್ಮ ೫೦ ದಿನಗಳ ಆಡಳಿತದಲ್ಲಿ ಒಟ್ಟು ೫೫ ಅನಿವಾಸಿ ಭಾರತೀಯರನ್ನು ಉನ್ನತ ಹುದ್ದೆಗಳಿಗೆ ನೇಮಿಸಿದ್ದಾರೆ. ಆಡಳಿತದ ವಿಭಾಗದ ಉನ್ನತ ನಾಯಕತ್ವ ಹುದ್ದೆಗಳಿಂದ ಹಿಡಿದು, ನಾಸಾ ತನಕವೂ ಸರ್ಕಾರದ ಪ್ರತಿಯೊಂದು ವಿಭಾಗದಲ್ಲಿ ಭಾರತೀಯರ ಮೂಲದವರಿಗೆ ಬೈಡನ್ ಸ್ಥಾನ ನೀಡಿದ್ದಾರೆ. ಅಲ್ಲದೇ ತಮ್ಮ ಭಾಷಣ ರಚಿಸುವ ಕಾರ್ಯಕ್ಕೂ ಅನಿವಾಸಿ ಭಾರತೀಯರನ್ನೇ ಬೈಡನ್ ನೇಮಿಸಿದ್ದಾರೆ.