ಪಿಎಸ್‌ ಐ ನೇಮಕಾತಿ ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಎನ್ಎಸ್ ಯುಐ ಪ್ರತಿಭಟನೆ

ಹೊಸದಿಗಂತ ವರದಿ, ಮಡಿಕೇರಿ
ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರದ ವಿರುದ್ಧ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಎನ್‍ಎಸ್‍ಯುಐನ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ರಾಜ್ಯ ಸರಕಾರ ನಡೆಸಿದ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಬಹಿರಂಗವಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವಿವಿಧ ಹಗರಣಗಳು ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಕೋಟ್ಯಂತರ ರೂ.ಹಗರಣದ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಸಚಿವರುಗಳು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಹಗರಣವನ್ನು ಮುಚ್ಚಿ ಹಾಕಲು ಸರಕಾರ ಮರುಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾದವರ ಜೀವನದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಷ್ಟೋ ಅಭ್ಯರ್ಥಿಗಳು ಆತ್ಮಸ್ಥೆರ್ಯ ಕಳೆದುಕೊಂಡಿದ್ದು, ಮರುಪರೀಕ್ಷೆ ಮಾಡುವ ನಿರ್ಧಾರವನ್ನು ಕೈಬಿಡಬೇಕು ಮತ್ತು ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಪ್ರಾಮಾಣಿಕರನ್ನು ನೇಮಕ ಮಾಡಿಕೊಳ್ಳಬೇಕು.ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಮರು ಪರೀಕ್ಷೆ ಆದೇಶವನ್ನು ಹಿಂಪಡೆಯದಿದ್ದಲ್ಲಿ ಜಿಲ್ಲಾ ಎನ್.ಎಸ್.ಯು.ಎ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ರೋಶನ್ ಗಣಪತಿ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ಮಾಜಿ ಸೈನಿಕರ ಘಟಕದ ಅಧ್ಯಕ್ಷ ಗಣೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಎಸ್.ಸಿ ಘಟಕದ ಅಧ್ಯಕ್ಷ ಮುದ್ದುರಾಜ್, ಪ್ರಮುಖರಾದ ನಂದಿನೆರವಂಡ ಅಯ್ಯಪ್ಪ, ಪಿ.ಎಲ್.ಸುರೇಶ್, ಧ್ರುವ, ಪಿಯೂಷ್ ಪೆರೇರ, ಎನ್‍ಎಸ್‍ಯುಐ ಕಾರ್ಯಕರ್ತರಾದ ರಾಮುಕುಮಾರ್, ಸಂಗಮ್, ಲಿಖಿನ್, ಹ್ಯಾರಿಸ್, ಸುಹೇಲ್ ಮತ್ತಿರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!