ಪಂಚಮಸಾಲಿಗಳ ಹಿಂದುಳಿದ ವರ್ಗ ಸೇರ್ಪಡೆಗೆ ಸಮುದಾಯದಲ್ಲೇ ವಿರೋಧ

ಹೊಸದಿಗಂತ ವರದಿ, ಸೋಮವಾರಪೇಟೆ
ರಾಜ್ಯದ ಲಿಂಗಾಯತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗ 2ಎ ಗೆ ಸೇರಿಸಬೇಕೆಂಬ ಬೇಡಿಕೆಗೆ ಕೊಡಗಿನಲ್ಲಿ ಸಮುದಾಯದೊಳಗೆ ವಿರೋಧ ವ್ಯಕ್ತವಾಗಿದೆ.
ಸರ್ಕಾರದ ಆದೇಶದಂತೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲು ರಾಜ್ಯ ಪ್ರವಾಸ ಕೈಗೊಂಡಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೇತೃತ್ವದ ತಂಡ ಕೊಡಗು ಜಿಲ್ಲೆಗೆ ಆಗಮಿಸಿ ಸಮುದಾಯದವರಿಂದ ವಿವರ ಬಯಸಿದ ಸಂದರ್ಭ ನಾವೆಲ್ಲಾ ವೀರಶೈವ ಲಿಂಗಾಯತರು, ಪಂಚಮಸಾಲಿಗಳು ಎಂಬುದು ಯಾರು ಎನ್ನುವುದೇ ಗೊತ್ತಿಲ್ಲ ಆದ್ದರಿಂದ ಮೀಸಲಾತಿ ನೀಡಿದರೆ ಎಲ್ಲಾ ವೀರಶೈವ ಲಿಂಗಾಯತರಿಗೂ ನೀಡಿ ಎಂದು ಆಗ್ರಹಿಸಿದರು.
ಸೋಮವಾರಪೇಟೆ ತಾಲೂಕಿನ ಕೂಗೆಕೋಡಿ ಹಾಗೂ ಕೊಡ್ಲಿಪೇಟೆಗೆ ತೆರಳಿದ ತಂಡದ ಸದಸ್ಯರು ಕೆಲವು ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಮತ್ತೊಂದೆಡೆ ಸಾರ್ವಜನಿಕವಾಗಿಯೂ ಅಭಿಪ್ರಾಯ ಸಂಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಬಿಟ್ಟರೆ ನಮಗೇನೂ ಗೊತ್ತಿಲ್ಲ. ಎಲ್ಲರೂ ಒಟ್ಟಾಗಿ,ಒಗ್ಗಟ್ಟಾಗಿ ಬದುಕುತ್ತಿದ್ದೇವೆ ಆದರೆ ಕೆಲವರು ತಮ್ಮ ರಾಜಕೀಯಕ್ಕಾಗಿ ನಮ್ಮ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪಂಚಮಸಾಲಿಗಳೆನ್ನುವವರು ಕೊಡಗಿನಲ್ಲಿ ಇಲ್ಲ. ಆದರೂ ಇದ್ದಾರೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮನ್ನು ಬಳಸಿ ಕೊಳ್ಳಬೇಡಿ. ಮೀಸಲಾತಿ ನೀಡುವುದಾದರೆ ಎಲ್ಲಾ ವೀರಶೈವ ಲಿಂಗಾಯತರಿಗೂ ನೀಡಿ. ಅದನ್ನು ಬಿಟ್ಟು ಸಮುದಾಯ ಒಡೆದು ಮೀಸಲಾತಿ ನೀಡುವ ಅವಶ್ಯಕತೆ ಇಲ್ಲ ಎಂದರು.
ಈ ಸಂದರ್ಭ ಮಾತನಾಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸರ್ಕಾರದ ಆದೇಶದಂತೆ ನಾವು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ನಿಮ್ಮ ಅಭಿಪ್ರಾಯಗಳನ್ನು ವರದಿಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯರು ಮನೆಗಳಿಗೆ ತೆರಳಿ ಮಾಹಿತಿ ಕೇಳಿದ ಸಂದರ್ಭದಲ್ಲಿ ಸಮುದಾಯದವರು ನಾವು ವೀರಶೈವ ಲಿಂಗಾಯತ ಎಂಬುದಾಗಿಯೇ ತಿಳಿಸಿದರು.
ಈ ಸಂದರ್ಭ ಆಯೋಗದ ಸದಸ್ಯರಾದ ಕಲ್ಯಾಣಕುಮಾರ್, ರಾಜಶೇಖರ್, ಸುವರ್ಣ, ಅರುಣ್ ಕುಮಾರ್, ಶಾರದಾ ನಾಯಕ್, ದಯಾನಂದ, ಜಗದೀಶ್, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಾದ ಕವಿತಾ, ಮಂಜುನಾಥ್, ದೊಡ್ಡಮಳ್ತೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿಂದು ಸುದೀಪ್ ,ಕೂಗೆಕೋಡಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್ ಗ್ರಾಮದ ಪ್ರಮುಖರಾದ ಶಿವಣ್ಣ, ಕುಶವಂತ್, ಸೋಮಶೇಖರ್, ಶಿವನಂಜಪ್ಪ, ಚಂದ್ರಶೇಖರ್, ನಿರಂಜನ್, ವಿನಯ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಜಿಲ್ಲಾಧ್ಯಕ್ಷ ಎ.ಎಸ್.ಮಲ್ಲೇಶ್, ಕಾರ್ಯದರ್ಶಿ ಗಿರೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಷಾರಾಣಿ, ಗೌರವಾಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಭಾಗವತಿ ದೇಶಮುಖ್ ಕಾರ್ಯದರ್ಶಿ ಗೀತಾ ರಾಜು, ಸರಿತಾ, ತಾಲೂಕು ಘಟಕದ ಅಧ್ಯಕ್ಷ ಜಿ.ಬಿ.ಜಯರಾಜ್, ವೀರಶೈವ ಮಹಾಸಭಾದ ಯುವ ಘಟಕದ ತಾಲೂಕು ಅಧ್ಯಕ್ಷ ಆದರ್ಶ್ ಪದಾಧಿಕಾರಿಗಳಾದ ಪ್ರೇಂನಾಥ್, ಲಿಖಿತ್, ಜೀವನ್ ಮುಂತಾದವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!