ʻಕಲ್ಬುರ್ಗಿ ವಿರಾಟ್ ಸಮಾವೇಶಕ್ಕೆ ಬರೋಬ್ಬರಿ ಐದು ಲಕ್ಷಕ್ಕೂ ಅಧಿಕ ಜನರ ಆಗಮನ ನಿರೀಕ್ಷೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಅಕ್ಟೋಬರ್ 30ರಂದು ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ಕಲ್ಬುರ್ಗಿಯಲ್ಲಿ ನಡೆಯಲಿದ್ದು,  ಈ ಐತಿಹಾಸಿಕ ಸಮಾವೇಶಕದಕೆ 5 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.30ರಂದು ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಸಂಸದರು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮುಂದಿನ 2 ತಿಂಗಳಲ್ಲಿ ವಿವಿಧ ರೀತಿಯ ಜನಜಾಗೃತಿ ಸಮಾವೇಶಗಳನ್ನು ರಾಜ್ಯದಲ್ಲಿ ವಿವಿಧೆಡೆ ನಡೆಸಲಾಗುತ್ತಿದೆ. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕದ ಸಿದ್ಧತೆ ಎಂಬ ಕಲ್ಪನೆಯೊಂದಿಗೆ ರಾಜ್ಯಾದ್ಯಂತ ಎಲ್ಲ ಸಮುದಾಯ- ಎಲ್ಲ ವ್ಯಕ್ತಿಗಳನ್ನು ಜೋಡಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಹಿಂದುಳಿದ ವರ್ಗಗಳ ಚಟುವಟಿಕೆಗಳು- ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಟ್ಟಿವೆ. ಹಿಂದುಳಿದ ವರ್ಗಗಳ ಜಾತಿಗಳ ಆಯೋಗಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಸಾಂವಿಧಾನಿಕ ಮಾನ್ಯತೆ ಕೊಟ್ಟಿದೆ. ಹಿಂದಿನ ಸರ್ಕಾರಗಳು ಈ ಕುರಿತು ಕೇವಲ ಮಾತನ್ನಷ್ಟೇ ಆಡಿದ್ದವು ಎಂದು ಟೀಕಿಸಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 250 ಕೋಟಿ ನೀಡಿದ್ದು, ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಅವರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ. ಹಾಸ್ಟೆಲ್‍ಗಳ ನಿರ್ಮಾಣ, ಶೈಕ್ಷಣಿಕ ಚಟುವಟಿಕೆಗೆ ಉತ್ತೇಜನ, ಗಂಗಾ ಕಲ್ಯಾಣ ಯೋಜನೆ ವಿಸ್ತರಣೆ ಮೂಲಕ ಈ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ವರ್ಗಗಳ ಧ್ವನಿ ಎಂದು ಭಾಷಣಕ್ಕಷ್ಟೇ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ಕಲ್ಬುರ್ಗಿಯ ಈ ಸಮಾವೇಶ ಹಿಂದುಳಿದ ವರ್ಗಗಳ ಸಂಘಟನೆಯ ಪ್ರತೀಕ. ಬಿಜೆಪಿ ಒಬಿಸಿ ಮೋರ್ಚಾದ ಶಕ್ತಿ, ಸಂಘಟನೆಯನ್ನು ಅದು ಅನಾವರಣಗೊಳಿಸಲಿದೆ. ಸಂವಿಧಾನದಲ್ಲಿ ತಿದ್ದುಪಡಿ ಹಿಂದುಳಿದ ವರ್ಗಗಳ ಗುರುತಿಸುವಿಕೆ ಅವಕಾಶ, ಜಸ್ಟಿಸ್ ರೋಹಿಣಿ ಕಮಿಷನ್ ಸ್ಥಾಪನೆ, ಮೀಸಲಾತಿ ಕೊಡುಗೆ ಬಿಜೆಪಿಯ ದೊಡ್ಡ ಪ್ರಯತ್ನ ಎಂದು ಮೆಚ್ಚುಗೆ ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!