‘ಕ್ರಷರ್’ಗಳ ಮುಷ್ಕರ; ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳು, ಅಭಿವೃದ್ಧಿಗೂ ಹಿನ್ನಡೆ

ಹೊಸ ದಿಗಂತ ವರದಿ, ಮಡಿಕೇರಿ:

ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಕ್ರಷರ್ ಮತ್ತು ಕಲ್ಲುಕೋರೆ ಮಾಲೀಕರ ಅಸೋಸಿಯೇಷನ್ ನೀಡಿರುವ ರಾಜ್ಯವ್ಯಾಪಿ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ‘ಕ್ರಷರ್’ಗಳು ಮುಚ್ಚಲ್ಪಟ್ಟು, ಕಟ್ಟಡ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಲಾರಿ ಮಾಲಕರು, ಚಾಲಕರು, ಕಾರ್ಮಿಕರನ್ನು ಒಳಗೊಂಡಂತೆ 10 ಸಾವಿರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವುದಾಗಿ ಕೊಡಗು ಜಿಲ್ಲಾ ಲಾರಿ ಮಾಲಕರು ಮತ್ತು ಚಾಲಕರ ಸಂಘ ಕಳವಳ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಶೂರ್ ಮೊಹಮ್ಮದ್ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಕ್ರಷರ್  ಮುಚ್ಚಲ್ಪಟ್ಟಿರುವುದರಿಂದ ಲಾರಿ ಮಾಲಕರು, ಚಾಲಕರು, ಕಾರ್ಮಿಕ ವರ್ಗ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಗೆ ಸೀಮಿತವಾಗಿ ಶುಕ್ರವಾರ ಸಂಜೆ 6 ಗಂಟೆಯ ಒಳಗಾಗಿ ಸಮಸ್ಯೆಯ ಬಗೆಹರಿಕೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿ.31 ರಂದು ಬೆಳಗ್ಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದಲ್ಲಿ ಜಾಥಾ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಸೇರಿದಂತೆ ‘ಅಹೋರಾತ್ರಿ’ ಪ್ರತಿಭಟನೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಕ್ರಷರ್’ಗಳಿಗೆ ವಿಧಿಸುವ ಪೆನಾಲ್ಟಿಗಳಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಕ್ರಷರ್ ಮತ್ತು ಕಲ್ಲುಕೋರೆ ಮಾಲಕರ ಅಸೋಸಿಯೇಷನ್ ಸರ್ಕಾರವನ್ನು ಕೋರಿದ್ದಲ್ಲದೆ, ಬೆಳಗಾಂ ಅಧಿವೇಶನದಲ್ಲಿ ಸಮಸ್ಯೆ ಬಗೆಹರಿಯಬಹುದೆನ್ನುವ ನಿರೀಕ್ಷೆ ಹೊಂದಿತ್ತು. ಆದರೆ, ಸಮಸ್ಯೆ ಅಧಿವೇಶನದಲ್ಲಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಡಿ.22 ರಿಂದ ಅಸೋಸಿಯೇಷನ್ ಏಕಾಏಕಿ ನೀಡಿದ ಕರೆಯಂತೆ ಕ್ರಷರ್‍’ಗಳು ಮುಚ್ಚಲ್ಪಟ್ಟಿರುವುದಾಗಿ ತಿಳಿಸಿದರು.
ಜಿಲ್ಲೆಯಾದ್ಯಂತ ಕಾಮಗಾರಿಗಳು ಸ್ಥಗಿತ: ಕ್ರಷರ್‍’ಗಳು ಮುಚ್ಚಲ್ಪಟ್ಟಿರುವುದರಿಂದ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಇತರೆ ಖಾಸಗಿಯವರ ಕಾಮಗಾರಿಗಳೂ ಸ್ಥಗಿತಗೊಂಡಿವೆ. ಅಭಿವೃದ್ಧಿ ಕಾಮಗಾರಿಗೆ ಅಗತ್ಯವಾದ ಎಂ. ಸ್ಯಾಂಡ್, ಜಲ್ಲಿ, ಕಲ್ಲುಗಳನ್ನು ಪೂರೈಸಲು ಜಿಲ್ಲೆಯ ಲಾರಿ ಮಾಲಕರು ಚಾಲಕರುಗಳಿಗೆ ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 8 ಕ್ರಷರ್’ಗಳಿದ್ದು, ಸ್ಥಳೀಯ ಬಹುತೇಕ ಕಾಮಗಾರಿಗಳಿಗೆ ಇಲ್ಲಿಂದಲೇ ಸಾಮಗ್ರಿಗಳ ಸರಬರಾಜಾಗುತ್ತದೆ. ಈ ಕ್ರಷರ್‍’ಗಳು ಇಂದು ಪ್ರತಿಭಟನೆ ಹಿನ್ನೆಲೆ ಮುಚ್ಚಲ್ಪಟ್ಟಿರುವುದರಿಂದ ಸಾಮಗ್ರಿಗಳ ಸಾಗಾಟ ವ್ಯವಸ್ಥೆಯಡಿ ಬರುವ ಲಾರಿ ಮಾಲಕರು, ಚಾಲಕರು, ಕಾರ್ಮಿಕರ ಬದುಕು ದುರ್ಬರವಾಗಿದೆಯೆಂದು ಹೇಳಿದರು.
ಕ್ರಷರ್‍’ಗಳ ಮುಷ್ಕರದಿಂದ ಲಾರಿ ಮಾಲಕ, ಚಾಲಕರು, ಕಾರ್ಮಿಕರೊಂದಿಗೆ ಗ್ರಾಹಕರೂ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಅಗತ್ಯ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ನಡೆಸಲು ಸಾಮಗ್ರಿಗಳು ಲಭ್ಯವಿಲ್ಲದೆ ನಷ್ಟಕ್ಕೆ ಒಳಗಾಗುವ ಅಪಾಯ ಇದೆಯೆಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಲಾರಿ ಮಾಲಕರು ಮತ್ತು ಚಾಲಕರ ಸಂಘದ ಕಾನೂನು ಹೋರಾಟ ಸಮಿತಿಯ ಅಧ್ಯಕ್ಷ ಬೋಪಣ್ಣ ಎಂ.ಬಿ., ಜಿಲ್ಲಾ ಖಜಾಂಚಿ ಮಂಜು ಆರ್., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿಜು ಎಂ.ಎ., ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಜಿ. ಮೋಹನ್ , ಸಂಘದ ಸದಸ್ಯ ಕೆಂಚಪ್ಪ ಡಿ. ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!