ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ವರದಿ, ಮಂಡ್ಯ :
ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕ್ರಷರ್ಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಂ.ವಿ.ಪದ್ಮಜಾ ಅವರು ಮಿಂಚಿನ ದಾಳಿ ನಡೆಸಿ ಬೀಗ ಜಡಿದಿದ್ದಾರೆ.
ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿ ಅಕ್ರಮ ಗಣಿ, ಕ್ರಷರ್ ನಡೆಸುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುವ ಮೂಲಕ ಅಕ್ರಮ ಗಣಿ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣದ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನಾಲ್ಕು ಕ್ರಷರ್ಗಳ ಮೇಲೆ ದಾಳಿ ನಡೆಸಿ ಬೀಗ ಜಡಿದಿರುವ ಹಿರಿಯ ಭೂ ವಿಜ್ಞಾನಿಯವರು, ಮತ್ತೆ 4 ಅಕ್ರಮ ಕ್ರಷರ್ಗಳ ಮೇಲೆ ದಾಳಿಗೆ ಸಿದ್ಧತೆ ನಡೆಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕು ಕಾಳೇನಹಳ್ಳಿಯ ಅಪ್ಪಾಜಿ ಕ್ರಷರ್, ಈಶಾ ಕ್ರಷರ್, ಜಕ್ಕನಹಳ್ಳಿಯ ಎಂ.ಎಂ.ಮೈನ್ ಕ್ರಷರ್, ಮಂಜುನಾಥ ಕ್ರಷರ್ಗಳ ಮೇಲೆ ದಾಳಿ ನಡೆಸಿ ಕಾನೂನುಬಾಹೀರವಾಗಿ ಕ್ರಷರ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸೀಜ್ ಮಾಡಿಸಿದ್ದಾರೆ. ಅದೇ ರೀತಿ ಪಾಂಡವಪುರ ತಾಲೂಕಿನಲ್ಲಿ ಪರವಾನಗಿ ಇಲ್ಲದೆ ಕಟ್ಟಡ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 4 ಲಾರಿಗಳು ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 4 ಲಾರಿಗಳಿಗೆ ದಂಡ ವಿಧಿಸಿದ್ದಾರೆ.