ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕಲಬುರಗಿ:
ಲೊಕೋಪಯೋಗಿ ಇಲಾಖೆಯ ವಿವಿಧ ಹಂತದ ಕಚೇರಿಗಳು ಒಂದೇ ಸೂರಿನಡಿ ಇರಬೇಕೆಂಬ ಪರಿಕಲ್ಪನೆಯಿಂದ 47.10 ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ ವಾಸ್ತುಶಿಲ್ಪಿಯೊಂದಿಗೆ ಕಲಬುರಗಿ ನಗರದಲ್ಲಿ ನಿರ್ಮಾಣಗೊಂಡಿರುವ “ಲೋಕೋಪಯೋಗಿ ಭವನ” ಸೇರಿದಂತೆ ಕಲಬುರಗಿ ಜಿಲ್ಲೆಯ 181.85 ಕೋಟಿ ರೂ. ಬೃಹತ್ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.
ನೂತನ ಲೋಕೋಪಯೋಗಿ ಭವನದಲ್ಲಿ ಅಯೋಜಿಸಲಾದ ಭವ್ಯ ಕಾರ್ಯಕ್ರಮದಲ್ಲಿ ಲೊಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಅರೋಗ್ಯ ಇಲಾಖೆಯ ಒಟ್ಟು 16 ಕಾಮಗಾರಿಗಳಿಗೆ ಅಡಿಗಲ್ಲು, ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು.
ಕಲಬುರಗಿ-ಶರಣ ಸಿರಸಗಿ, ಕಲಬುರಗಿ-ರಾಮ ಮಂದಿರ ನಡುವೆ ರೈಲ್ವೆ ರಸ್ತೆ ಮೇಲ್ಸೇತುವೆ ಲೋಕಾರ್ಪಣೆ, ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನೂತನ ಕಟ್ಟಡ, ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳ ಉದ್ಘಾಟನೆ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನೂತನ ಕಟ್ಟಡಗಳ ಉದ್ಘಾಟನೆ ಇಂದು ನೆರವೇರಿಸಲಾಗಿದೆ ಎಂದ ಅವರು ಕಳೆದ 2 ವರ್ಷದಲ್ಲಿ ನೆರೆ ಪ್ರವಾಹ, ಕೋವಿಡ್ ಮಹಾಮಾರಿ ನಡುವೆಯೂ ಅಭಿವೃದ್ಧಿ ಕಾರ್ಯ ನಿರಂತರ ಸಾಗುತ್ತಿದ್ದು, ಈ ಅಭಿವೃದ್ಧಿ ಕಾರ್ಯಗಳು ಸಾಕ್ಷಿಯಾಗಿವೆ. ಸಮಗ್ರ ಕರ್ನಾಟಕದ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಕಲ್ಯಾಣ ಕರ್ನಾಟಕ ಅಭಿವೃದಿಗೆ ಸಂಕಲ್ಪ
ಕಲ್ಯಾಣ ಕರ್ನಾಟಕ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ರೂಪಿಸಿದೆ. 2021-22ನೇ ಸಾಲಿಗೆ ಕೆ.ಕೆ.ಅರ್.ಡಿ.ಬಿ. ಮಂಡಳಿಗೆ 1500 ಕೋಟಿ ರೂ. ಅನುದಾನ ಹಂಚಿಕೆ ಮಾಡಿ ಕ್ರಿಯಾ ಯೋಜನೆಗೂ ಅನುಮೋದನೆ ನೀಡಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಗಳು, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ವಲಯದಲ್ಲಿ ಈ ಅನುದಾನ ವಿನಿಯೋಗಿಸಲಾಗುತ್ತಿದೆ. ಕೋವಿಡ್ ಸಂಕಷ್ಟದ ನಡುವೆಯೂ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಯಾವುದೇ ಅನುದಾನ ಕಡಿತ ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಮಾನವ ಸಂಪನೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘವನ್ನು ರಚಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ದೃಢ ಸಂಕಲ್ಪವಾಗಿದೆ ಎಂದು ಸಿ.ಎಂ. ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ 3000 ಕೋಟಿ ರೂ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಲು 2021-22ನೇ ಸಾಲಿನಲ್ಲಿ 3,000 ಕೋಟಿ ರೂ. ಗಳನ್ನು ಆಯವ್ಯಯದಲ್ಲಿ ಮೀಸಲಿರಿಸಿದೆ ಎಂದು ತಿಳಿಸಿದ ಸಿ.ಎಂ. ಬಿ.ಎಸ್.ಯಡಿಯೂರಪ್ಪ ಇತ್ತೀಚೆಗμÉ್ಟ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ 10 ಕೋಟಿ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅಂತೆಯೇ ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ಸಭೆ ನಡೆಸಿ 94 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಂಡಿರುವ ಬಸವ ಅಂತರರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ನಿರ್ಮಾಣವನ್ನು ಚುರುಕುಗೊಳಿಸಲು ಸೂಚಿಸಲಾಗಿದೆ ಎಂದರು.
ಕೋವಿಡ್ ಮೂರನೇ ಅಲೆಗೆ ಸನ್ನದ್ಧ
ರಾಜ್ಯ ಸರ್ಕಾರವು ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಕೋವಿಡ್ 3ನೇ ಅಲೆ ಇನ್ನಷ್ಟು ಕಠಿಣವಾದ ಸಂದರ್ಭವನ್ನು ಸೃಷ್ಟಿಸಲಿದೆ ಎನ್ನುವುದು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ತಡೆಗಟ್ಟಲು ಸರ್ಕಾರ ಸನ್ನದ್ಧವಾಗಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ನಮ್ಮಿಂದ ಇನ್ನೂ ದೂರವಾಗಿಲ್ಲ ಎಂಬುದನ್ನು ಎಲ್ಲರು ಮನಗಂಡು ಮಾಸ್ಕ್ ಧರಿಸುವುದು, ಸ್ವಚ್ಚತೆ, ಸಾಮಾಜಿಕ ಅಂತರ ಹಾಗೂ ನಿರಂತರ ಸ್ಯಾನಿಟೈಸ್ ಬಳಕೆಯ ನಡವಳಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿಗಳು ಒತ್ತಿ ಹೇಳಿದರು.
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮಾತನಾಡಿ ತಳ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಇಂದು ಸುಮಾರು 30 ಕೋಟಿ ರೂ. ವೆಚ್ಚದ ನೂತನ ವಸತಿ ಶಾಲೆಗಳನ್ನು ಉದ್ಘಾಟಿಸಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಸಿ.-ಎಸ್.ಟಿ. ವಸತಿ ಶಾಲೆಗಳನ್ನು ತರೆಯಬೇಕು ಎಂದು ಹಂಬಲದಿಂದ ಮುಖ್ಯಮಂತ್ರಿಯವರು ಪ್ರಸÀಕ್ತ ಸಾಲಿನಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 25 ಕ್ರೈಸ್ ವಸತಿ ಶಾಲೆಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದಾರೆ.
ಮಕ್ಕಳ ಮನೆ ಬಾಗಿಲಿಗೆ ಶಿಕ್ಷಣ ಒಯ್ಯಬೇಕು ಎಂಬ ನಿಟ್ಟಿನಲ್ಲಿ ರಾಜ್ಯದಾದ್ಯಂತ 826 ಕ್ರೈಸ್ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 1.50 ಲಕ್ಷ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಸ್.ಸಿ.-ಎಸ್.ಟಿ. ಮಕ್ಕಳಿಗೆ ಶಿಕ್ಷಣ ನೀಡುವುದಷ್ಟೆ ಅಲ್ಲ ಕ್ರೀಡೆಗೂ ಪ್ರೋತ್ಸಾಹ ನೀಡಬೇಕೆಂಬ ಕಾರಣದಿಂದ ಈ ವರ್ಷ ವಿಭಾಕ್ಕೊಂದು “ಸ್ಪೋರ್ರ್ಟ್ ಎಕ್ಸಿಲೆನ್ಸಿ ಸೆಂಟರ್” ಸ್ಥಾಪನೆಗೆ ಆಯವ್ಯಯದಲ್ಲಿ 5 ಕೋಟಿ ರೂ. ಮೀಸಲಿರಿಸಿದೆ. ರಾಷ್ಟಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಆಶಯಕ್ಕನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದ ಸಮುದಾಯದ ಶ್ರೇಯೋಭಿವೃದ್ಧಿಗೆ ಪ್ರಸಕ್ತ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ 18,331.54 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 7,673.47 ಕೋಟಿ ರೂ.ಗಳು ಸೇರಿದಂತೆ ಒಟ್ಟಾರೆ 26,000 ಕೋಟಿ ರೂ.ಗಳ ಅನುದಾನವನ್ನು ಒದಗಿಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದೆ ಎಂದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್. ನಿರಾಣಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು ಇದ್ದರು. ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಸ್ವಾಗತಿಸಿದರು.