ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ಬಿಜೆಪಿ ಬೆಂಬಲಿಸಿ: ಜೆ.ಪಿ.ನಡ್ಡಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಸಾಧ್ಯ. ದೇಶ ವಿರೋಧಿ ಕಾಂಗ್ರೆಸ್ಸಿಗರನ್ನು ಮನೆಯಲ್ಲೇ ಕೂರಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮಾನಸಿಕವಾಗಿ ದಿವಾಳಿ ಆಗಿದ್ದಾರೆ. ಒಡೆದು ಆಳುವ ನೀತಿಯ ಕಾಂಗ್ರೆಸ್ ಮುಖಂಡರನ್ನು ಸೋಲಿಸಿ ಮನೆಯಲ್ಲೇ ಕೂರಿಸಿ ಎಂದು ಎಚ್ಚರಿಸಿದರು.

ದೇಶದ 2ನೇ ದೊಡ್ಡ ಅರ್ಥ ವ್ಯವಸ್ಥೆಯಾಗಿ ಕರ್ನಾಟಕ ಹೊರಹೊಮ್ಮಿದೆ. ರೈತ ವಿದ್ಯಾನಿಧಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ರೈತರಿಗೆ ಸಾಲ, ಮೀಸಲಾತಿ ಹೆಚ್ಚಳ ಸೇರಿ ಸಮಗ್ರ ಅಭಿವೃದ್ಧಿಯ ಕಾರ್ಯವನ್ನು ಗಮನದಲ್ಲಿಟ್ಟು ಬಿಜೆಪಿಯನ್ನು ಬೆಂಬಲಿಸ್ಬೇಕು ಎಂದು ಮನವಿ ಮಾಡಿದರು.

ಪ್ರಧಾನಿಯವರು ಬಡವರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನರಿಗೆ ನೆರವಾಗಿದ್ದಾರೆ. ಉಜ್ವಲ, ಉಜಾಲಾ, ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಮತ್ತಿತರ ಯೋಜನೆಗಳಿಂದ ಜನಸಾಮಾನ್ಯರಿಗೆ ಪ್ರಯೋಜನ ಸಿಕ್ಕಿದೆ ಎಂದ ಅವರು, ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ, ಒಡೆದು ಆಳುವ ನೀತಿ, ಕಮಿಷನ್, ಜಾತಿ ರಾಜಕೀಯ ಮತ್ತು ಕುಟುಂಬ ರಾಜಕೀಯದ ಪಕ್ಷಗಳಿವು ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಜಾಮೀನಿನಲ್ಲಿದ್ದಾರೆ. ಜೆಡಿಎಸ್ ಕೂಡ ಭ್ರಷ್ಟರ ಪಕ್ಷ. ಇವು ಭಾಯಿ ಭಾಯಿ ಪಕ್ಷಗಳು ಎಂದರಲ್ಲದೆ, ಜೆಡಿಎಸ್‍ಗೆ ಮತ ಕೊಟ್ಟರೆ ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ ಎಂದು ಎಚ್ಚರಿಸಿದರು. ಪಿಎಫ್‍ಐ ನಾಯಕರನ್ನು ಕಾಂಗ್ರೆಸ್ ಬೆಂಬಲಿಸಿ ಅವರ ಕೇಸುಗಳನ್ನು ರದ್ದು ಮಾಡಿತ್ತು. ಆದರೆ, ಬಿಜೆಪಿ ಪಿಎಫ್‍ಐ ನಿಷೇಧಿಸಿದೆ ಎಂದು ವಿವರಿಸಿದರು.

ದೇಶದ ಸುರಕ್ಷತೆಗಾಗಿ ಮೋದಿಜಿ, ಯಡಿಯೂರಪ್ಪ- ಬೊಮ್ಮಾಯಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ಕೊಟ್ಟಿದ್ದಾರೆ ಎಂದರಲ್ಲದೆ, ಬೈರತಿ ಬಸವರಾಜ್ ಅವರನ್ನೂ ಅಭಿನಂದಿಸಿದರು.

ಬೆಂಗಳೂರಿಗೆ ದೇಶ ಮತ್ತು ವಿಶ್ವದಲ್ಲಿ ವಿಶೇಷ ಸ್ಥಾನಮಾನ ಇದೆ. ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡರ ನಾಡಿದು. ಸ್ಟಾರ್ಟಪ್, ತಂತ್ರಜ್ಞಾನದಲ್ಲಿ ಬೆಂಗಳೂರಿಗೆ ದೊಡ್ಡ ಹೆಸರಿದೆ ಎಂದು ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯ. ಮತ್ತೆ ಕರ್ನಾಟಕದಲ್ಲಿ ಕಮಲ ಅರಳುವ ಭರವಸೆ ಮೂಡಿದೆ ಎಂದರು. ಇದು ಅಧ್ಯಾತ್ಮದ ನಾಡು. ಜ್ಞಾನದ ನಾಡಿದು. ವಿಜ್ಞಾನದ ಕೊಡುಗೆ ನೀಡಿದ ನಾಡಿದು ಎಂದು ಮೆಚ್ಚುಗೆ ಸೂಚಿಸಿದರು.

ರಾಜ್ಯದ ಸಚಿವ ಆರ್.ಅಶೋಕ್ಮಾ ತನಾಡಿ ಬಿಜೆಪಿಗೆ ಮತ ಕೊಡಲು ವಿನಂತಿಸಿದರು. ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಮಾತನಾಡಿ, ಗರಿಷ್ಠ ಸುಳ್ಳು ಹೇಳುವವರು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು. ತಮಿಳುನಾಡಿನಲ್ಲೂ ಇದೇ ಮಾದರಿಯ ಸುಳ್ಳು ಆಶ್ವಾಸನೆ ಕೊಟ್ಟಿದ್ದು, ಅವನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಆಕ್ಷೇಪಿಸಿದರು. ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ರಾಜ್ಯದ ಸಚಿವರಾದ ಬೈರತಿ ಬಸವರಾಜ್ , ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮುನಿರತ್ನ, ಪಕ್ಷದ ಸಚಿವರು, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮುಖಂಡ ಸಚ್ಚಿದಾನಂದ ಮೂರ್ತಿ, ಜಿಲ್ಲಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಮತ್ತಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!