ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಮೈಸೂರು:
ಕೋವಿಡ್ನ ಮೊದಲ ಎರಡು ಅಲೆಯಿಂದ ಅಧಿಕಾರಿಗಳು ಹಲವಾರು ಪಾಠ ಕಲಿತಿದ್ದಾರೆ. 3ನೇ ಅಲೆ ಬಗ್ಗೆ ಪರಿಣಿತರು ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳದಿದ್ದರೆ ಮತ್ತೆ ಅಂತಹದ್ದೇ ಸ್ಥಿತಿ ಬರಬಹುದು. ಅದು ಮರುಕಳಿಸಬಾರದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ನ್ಯಾ. ಬಿ.ಎಸ್.ಪಾಟೀಲ್ ಹೇಳಿದರು.
ಶನಿವಾರ ಮೈಸೂರಿನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್-19ರ ಮೂರನೇ ಅಲೆ ಎದುರಿಸಲು ಮೈಸೂರು ಜಿಲ್ಲಾಡಳಿತ ಮಾಡಿಕೊಂಡಿರುವ ಪೂರ್ವಸಿದ್ಧತೆ ಬಗ್ಗೆ ಮಾಹಿತಿ ಪಡೆದರು.
ಕೋವಿಡ್ ಆರಂಭದಲ್ಲಿ ಜನರು ಎಲ್ಲಾ ಮುಂಚಾಗೃತ ಕ್ರಮಗಳನ್ನು ಪಾಲಿಸಿದರು. ಆದರೆ ಮೊದಲ ಅಲೆ ಕಡಿಮೆಯಾಗುತ್ತಿದ್ದಂತೆ ನಿರ್ಲಕ್ಷ್ಯವಹಿಸಿದರು. ಹೆಚ್.ಡಿ.ಕೋಟೆ ತಾಲ್ಲೂಕಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಮನಿಸಿದ್ದೇನೆ. ಜನರು ಮಾಸ್ಕ್ ಹಾಕುವುದನ್ನೇ ಆಗ ಬಿಟ್ಟಿದ್ದರು. ಎರಡನೇ ಅಲೆ ತೀವ್ರಗೊಳ್ಳುವ ವರೆಗೂ ಎಚ್ಚರತಪ್ಪಿದರು. ಇದರಿಂದ ಹೆಚ್ಚಿನ ಹಾನಿಯಾಗಿದೆ. ಪರಿಣಿತರು ಹೇಳಿರುವ 3ನೇ ಅಲೆಯಲ್ಲಿ ಇಂತಹ ನಿರ್ಲಕ್ಷ್ಯ ಆಗದಂತೆ ಅಧಿಕಾರಿಗಳು ಜನರಿಗೆ ತರಬೇತಿ, ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
3ನೇ ಅಲೆಯಲ್ಲಿ ಮಕ್ಕಳನ್ನು ಬಾಧಿಸುತ್ತದೆ ಎಂದು ಹೇಳಲಾಗುತ್ತಿದೆ. ಪೋಷಕರ ಮೂಲಕವೇ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ, ಮಕ್ಕಳನ್ನು ರಕ್ಷಿಸಿಕೊಳ್ಳಲು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ, ತಿಳುವಳಿಕೆ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮುಂತಾದವರನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ಗೆ ಸೂಕ್ತ ತರಬೇತಿ ನೀಡಿ, ಆ ಮೂಲಕ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಎಲ್ಲಾ ವೈದ್ಯಕೀಯ ಸೌಲಭ್ಯಗಳು ಜಿಲ್ಲಾ ಕೇಂದ್ರದಲ್ಲಿ ಇದ್ದರೆ ಸಾಲದು. ತಾಲ್ಲೂಕು ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲೂ ವೈದ್ಯಕೀಯ ಸೌಲಭ್ಯ ಸಿಗುವಂತೆ ತಯಾರಾಗಬೇಕು ಎಂದು ಸಲಹೆ ನೀಡಿದರು.
3ನೇ ಅಲೆ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಪೂರ್ವಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ವಿವರಿಸಿ, ಹಿಂದಿನ ಅನುಭವಗಳ ಮೇಲೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.
ಕೋವಿಡ್ ತೀವ್ರಗೊಂಡಿದ್ದ ಸಂದರ್ಭದಲ್ಲಿ ಕೆಲ ದಿನಗಳ ಕಾಲ ದಿನ 3 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಅಂತಹದ್ದೇ ಪರಿಸ್ಥಿತಿ ಮುಂದೆ ಪ್ರತಿ ದಿನ 3 ಸಾವಿರ, 4 ಸಾವಿರ ಅಥವಾ 5 ಸಾವಿರ ಪ್ರಕರಣಗಳು ಬಂದರೂ ಬೇಕಾಗುವಷ್ಟು ವೈದ್ಯಕೀಯ ಸೌಲಭ್ಯ ಹೊಂದಿಸಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬೆಂಗಳೂರು ಹೊರತು ಪಡಿಸಿದರೆ ಮೈಸೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಟೆಸ್ಟ್ ಆಗಿದೆ. ಈವರೆಗೆ ಸುಮಾರು 17 ಲಕ್ಷ ಜನರಿಗೆ ಲಸಿಕೆ ಆಗಿದ್ದು, ಜಿಲ್ಲೆಯ ಶೇ.50ರಷ್ಟು ಜನರಿಗೆ ಲಸಿಕೆ ಹಾಕಿದಂತಾಗಿದೆ ಎಂದು ತಿಳಿಸಿದರು.
ವಿವರಣೆ ಪಡೆದು ಮಾತನಾಡಿದ ನ್ಯಾ.ಬಿ.ಎಸ್.ಪಾಟೀಲ್, ದಿನಕ್ಕೆ 5 ಸಾವಿರ ಪ್ರಕರಣ ಬಂದರೂ ಎದುರಿಸುವ ಶಕ್ತಿ ಇದೆ ಎಂಬುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳು ದೈಹಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಸದೃಢವಾಗಿರಬೇಕು. ಸಂಕಷ್ಟದ ಸಂದರ್ಭದಲ್ಲಿ ನಿಜವಾದ ಪರೀಕ್ಷೆಗಳು ಎದುರಾಗುತ್ತವೆ. ಆಗ ಅಧಿಕಾರಿಗಳು, ವೈದ್ಯರು ಧೃತಿಗೆಟ್ಟರೆ ಪರಿಸ್ಥಿತಿ ಹತೋಟಿಗೆ ತರಲು ಕಷ್ಟವಾಗುತ್ತದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಚೇತನ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹಾ, ಡಿಸಿಪಿ ಪ್ರದೀಪ್ ಗುಂಟಿ, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಎ.ಎಂ.ಯೋಗೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಹೆಚ್.ಪ್ರಸಾದ್, ಎಂಎಂಸಿಆರ್ಐ ನಿರ್ದೇಶಕ ಡಾ. ಸಿ.ಪಿ.ನಂಜರಾಜ್ ಮತ್ತಿತರರು ಉಪಸ್ಥಿತರಿದ್ದರು.