Monday, August 15, 2022

Latest Posts

ಸಮಸ್ಯೆಗಳ ಎದುರಿಸಿ, ಅಭಿವೃದ್ಧಿ ಆಡಳಿತ ಕಾರ್ಯಗಳ ಕೈಗೊಳ್ಳಿ: ಜಿಲ್ಲಾಧಿಕಾರಿ ರಮೇಶ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳು, ಹೆಜ್ಜೆಗುರುತುಗಳಾಗಿ ಮುಂದೆ ಬರುವ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದರು.
ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಜಿ.ಪಂ.ತಿ ಸಿಇಒ ಎಸ್. ಪೂವಿತಾ ಅವರಿಗೆ ಶನಿವಾರ ಜಿ.ಪಂ.ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವಾಗ ಹಲವು ಸವಾಲುಗಳು, ಸಮಸ್ಯೆಗಳು ಎದುರಾಗುತ್ತವೆ, ಅವುಗಳನ್ನು ಮೆಟ್ಟಿ ನಿಂತು ಧೈರ್ಯವಾಗಿ ಅಭಿವೃದ್ಧಿ ಆಡಳಿತ ಕಾರ್ಯಗಳನ್ನು ಕೈಗೊಳ್ಳಬೇಕು ಆ ನಿಟ್ಟಿನಲ್ಲಿ ಪೂವಿತಾ ಅವರ ದಿಟ್ಟತನದಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಉತ್ತಮವಾಗಿ ಆಡಳಿತ ನಿರ್ವಹಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲೆಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಾಗ, ಯೋಜನೆಗಳಲ್ಲಿ ಯಶಸ್ವಿ ಅನುಷ್ಟಾನಗೊಳಿಸುವಾಗ ತಳಮಟ್ಟದ ಅಧಿಕಾರಿಗಳ ಸಹಕಾರ ಮುಖ್ಯವಾದುದು, ಈ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ದಿ ಕಾರ್ಯಗಳಲ್ಲಿ ಉತ್ತಮ ಆಡಳಿತ ಸೇವೆ ನೀಡಿದ್ದು , ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳು, ಯೋಜನೆಗಳು ಹೆಜ್ಜೆಗುರುತುಗಳಾಗಿ ಮುಂದಿನ ಅಧಿಕಾರಿಗಳಿಗೆ ಮಾರ್ಗದರ್ಶನವಾಗಲಿದೆ ಎಂದು ಅಭಿಪ್ರಾಯಿಸಿದರು.
ಅಧಿಕಾರಿಗಳ ವರ್ಗವನ್ನು ತಮ್ಮ ಕುಟುಂಬದಂತೆ ಭಾವಿಸಿ, ಉತ್ತಮ ಸಲಹೆ ಮಾರ್ಗದರ್ಶನ ನೀಡಿದಾಗ ಕಾರ್ಯವೈಖರಿಯು ಉತ್ತಮಗೊಳ್ಳಲಿದೆ, ಇದರಿಂದಾಗಿ ಅಧಿಕಾರಿಗಳ ಕೀರ್ತಿಯು ಹೆಚ್ಚಲಿದ್ದು ಉತ್ತಮ ಅಧಿಕಾರಿಯಾಗಿ ರೂಪುಗೊಳ್ಳಬಹುದು, ಸಮಸ್ಯೆಗಳನ್ನು ಸವಾಲಾಗಿ ಪರಿಗಣಿಸಿ ಯಶಸ್ವಿಯಾಗಿ ಬಗೆಹರಿಸುವ ಕಲೆ ರೂಡಿಸಿಕೊಳ್ಳಬೇಕು, ಜಿಲ್ಲೆಯ ಅಭಿವೃದ್ದಿಗೆ ಮುಖ್ಯ ಪಾತ್ರ ವಹಿಸಿದ್ದು ಅವರೊಟ್ಟಿಗೆ ಕೆಲಸ ನಿರ್ವಹಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ಪೂವಿತಾ ಅವರು ಶಿಸ್ತಿನ ಅಧಿಕಾರಿಯಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಹಕಾರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ದಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ, ಜಿಲ್ಲೆಯ ಹಳ್ಳಿಗಳಲ್ಲಿ ಕೋವಿಡ್ ನಿರ್ವಹಣೆ ಕುರಿತು ಗ್ರಾಮಪಂಚಾಯಿತಿ ಪಿಡಿಒ ಅಧಿಕಾರಿಗಳೊಂದೊಗೆ ಸಮಾಲೋಚಿಸಿ ಸಮರ್ಥವಾಗಿ ನಿಯಂತ್ರಿಸುವ ಆತ್ಮವಿಶ್ವಾಸ ತುಂಬಿದ್ದರು ಎಂದು ಸ್ಮರಿಸಿದರು.
ನಿರ್ಗಮಿತ ಸಿಇಒ ಎಸ್. ಪೂವಿತಾ ಮಾತನಾಡಿ ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದು ಚಿಕ್ಕಮಗಳೂರು ಜಿಲ್ಲೆ ಒಂದು ಮಾದರಿಯಲ್ಲಿ ವಿಶೇಷ ಎನಿಸಿದೆ. ಆರ್‍ಡಿಪಿಆರ್‍ಗೆ ಸಂಬಂಧಿಸಿದಂತೆ ಯೋಜನೆಗಳನ್ನು ಅನುಷ್ಟಾನಗೊಳಿಸುವಾಗ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆಡಳಿತ ಕಾರ್ಯದ ವೇಳೆ ಯಾವುದೇ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಿಂದಿಸಿಲ್ಲ, ಬದಲಾಗಿ ಸಲಹೆ ಮಾರ್ಗದರ್ಶನ ನೀಡಿದ್ದೇನೆ ಎಂದರು.
ಆಡಳಿತದ ವೇಳೆ ನಿರ್ದೇಶನ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಕೋವಿಡ್ ಸಂಕಷ್ಟದಲ್ಲಿ ಅಧಿಕಾರಿಗಳಿಗೆ ಮೇಲಿನ ಹಲ್ಲೆಗಳ ವಿರುದ್ದವಾಗಿ ಕ್ರಮ ಕೈಗೊಳ್ಳಲಾಗಿದೆ, ಜಿಲ್ಲೆಯು ಉತ್ತಮ ಅನುಭವ ನೀಡಿದೆ ಎಂದು ಸ್ಮರಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ ಅಧಿಕಾರಿಗಳಿಗೆ ಸಿಬ್ಬಂದಿಗಳ ಬೆನ್ನುತಟ್ಟಿ ಪ್ರೋತ್ಸಾಹಿಸುವ ಗುಣ ಇರಬೇಕು ಅದೆಲ್ಲವನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮೈಗೂಡಿಸಿಕೊಂಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರೂಪ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜ್, ಉಪಕಾರ್ಯದರ್ಶಿ ನಾಗರಾಜ್, ಕಿಶೋರ್, ತಫ್‍ಜುಲ್ ಹುಸೇನ್, ಇದ್ದರು. ಮೋನಿಕಾ ಪ್ರಾರ್ಥಿಸಿ, ಸೋಮಶೇಖರ್ ಸ್ವಾಗತಿಸಿ ನಿರೂಪಿಸಿದರು. ವಿಶ್ವನಾಥ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss