Friday, July 1, 2022

Latest Posts

ಪಂಜಾಬ್ ರೈತರ ಖಾತೆಗೆ ನೇರ ಬೆಂಬಲ ಬೆಲೆ ವರ್ಗಾವಣೆ: ಕೇಂದ್ರ ಕೃಷಿ ನೀತಿ ರೈತ ಪರ ಎನ್ನಲಾರಂಭಿಸಿದ ಅನ್ನದಾತ !

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಆಹಾರ ನಿಗಮ(ಎಫ್‌ಸಿಐ)ವು, ರೈತರಿಗೆ ಕೃಷಿ ಉತ್ಪನ್ನಗಳ ಮೇಲಿನ ಬೆಂಬಲ ಬೆಲೆಯನ್ನು ನೇರವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ರೈತರ ಭೂ ದಾಖಲೆಗಳನ್ನು ಸಲ್ಲಿಸುವಂತೆ ಇತ್ತೀಚೆಗೆ ಪಂಜಾಬ್ ಸರಕಾರಕ್ಕೆ ಸೂಚಿಸಿದ್ದು, ಇದೀಗ ಇದರ ಬೆನ್ನಿಗೇ ಹಲವು ರೈತರ ಖಾತೆಗಳಿಗೆ ಬೆಂಬಲ ಬೆಲೆ ನೇರವಾಗಿ ವರ್ಗಾವಣೆಗೊಳ್ಳಲಾರಂಭಿಸಿದ್ದರಿಂದ ರೈತರು ಹರ್ಷಿತರಾಗಿದ್ದಾರೆ. ಈ ವರೆಗೂ ಮಧ್ಯವರ್ತಿಗಳ ಹಿಡಿತದಲ್ಲಿದ್ದ ಪಂಜಾಬ್ ರೈತರಿಗೆ ಇದೇ ಮೊದಲ ಬಾರಿಗೆ ತಮ್ಮ ಉತ್ಪನ್ನಗಳಿಗೆ ನೇರ ಬೆಂಬಲ ಬೆಲೆ ಲಭಿಸಲಾರಂಭಿಸಿರುವುದು ಅತ್ಯಂತ ಖುಷಿ ತಂದಿದೆ.ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಕಾನೂನುಗಳು ಹೇಗೆ ರೈತ ಪರವಾಗಿದೆ ಎಂಬುದು ಇಷ್ಟರಿಂದಲೇ ರೈತರಿಗೆ ಅರ್ಥವಾಗಲಾರಂಭಿಸಿದೆ.
ನಾನು ೧೫ವರ್ಷಗಳಿಂದ ರೈತನಾಗಿ ಕಳೆದುದಕ್ಕೆ ನನ್ನ ಜೀವಮಾನದಲ್ಲೇ ಅತ್ಯಂತ ಸಂತಸ ಅನುಭವಿಸುತ್ತಿದ್ದೇನೆ. ಯಾಕೆಂದರೆ ನಾನು ರಾಜಪುರ ಮಂಡಿಯಲ್ಲಿ ಮಾರಾಟ ಮಾಡಿದ 171ಕ್ವಿಂಟಾಲ್ ಗೋದಿಗಾಗಿ ಕೇಂದ್ರ ಸರಕಾರ ನೀಡಿದ ಕನಿಷ್ಠ ಬೆಂಬಲ ಬೆಲೆಯಂತೆ 1.90ಲ.ರೂ. ಮತ್ತು 1.48ಲ.ರೂ.ಗಳು ನನ್ನ ಖಾತೆಗೆ ಜಮಾಗೊಂಡಿರುವುದಾಗಿ ನನ್ನ ಫೋನಿಗೆ ಸಂದೇಶ ಬಂದಿದೆ. ಇದೀಗ ನಾನು ರೈತನಾಗಿದ್ದಕ್ಕೆ ಸಾರ್ಥಕ ಭಾವ ಮೂಡಿಸಿದೆ ಎನ್ನುತ್ತಾರೆ 39ವರ್ಷ ಪ್ರಾಯದ ದಿಲೀಪ್ ಕುಮಾರ್. ಇವರು ರಾಜ್‌ಪುರ ಸಮೀಪದ ನೀಲ್‌ಪುರ ಗ್ರಾಮದ ರೈತರಾಗಿದ್ದಾರೆ .
ದಿಲೀಪ್ ಅವರು ತನ್ನ ಸುಮಾರು 40ಎಕರೆ ಕೃಷಿ ಪ್ರದೇಶ ಪೈಕಿ 10ಎಕರೆ ಪ್ರದೇಶದಲ್ಲಿ ಬೆಳೆದ ಉತ್ಪನ್ನಗಳನ್ನು ಮಂಡಿಗೆ ಒಯ್ದಿದಿದ್ದಾರೆ .ಉಳಿದ ಗೋದಿಯನ್ನು ಇನ್ನಷ್ಟೇ ಸಂಗ್ರಹಿಸಬೇಕಾಗಿದೆ.ಕ್ವಿಂಟಾಲಿಗೆ 1,975ರೂ.ಗಳಂತೆ ಬೆಂಬಲ ಬೆಲೆ ಪಡೆದಿದ್ದೇನೆ.ಇದು ನಾನು ನನ್ನ ಜೀವಮಾನದಲ್ಲೇ ಮೊತ್ತಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಬೆಂಬಲ ಬೆಲೆಯನ್ನು ಪಡೆಯುತ್ತಿರುವುದಾಗಿದೆ ಎನ್ನುತ್ತಾರೆ ದಿಲೀಪ್.
ಇದು ಅತ್ಯುತ್ತಮ ವ್ಯವಸ್ಥೆ.ನಮ್ಮ ಬೆಳೆಗಾಗಿ ನಮ್ಮ ಖಾತೆಗೆ ಹಣ ಜಮಾಗೊಳ್ಳುವುದಕ್ಕಿಂತ ಉತ್ತಮವಾದ ವ್ಯವಸ್ಥೆ ಬೇರಾವುದಿರಲು ಸಾಧ್ಯ?ಎಂದು ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಕೇಳಿದ್ದಾರೆ .ಈ ಹಿಂದೆ ನಾವು ನಮ್ಮ ಉತ್ಪನ್ನಗಳನ್ನು ಮಂಡಿಗೆ ಒಯ್ದ ಬಳಿಕ ನಮಗೆ ಆರ್ತಿಯಾಸ್ (ಎಪಿಎಂಸಿ ಅಥವಾ ಮಂಡಿಯಲ್ಲಿನ ಕಮಿಷನ್ ಏಜೆಂಟ್ ವ್ಯವಸ್ಥೆ)ಚೆಕ್ ನೀಡುತ್ತಿತ್ತು. ಆದರೆ ಅಲ್ಲಿ ಎಲ್ಲವೂ ಏಜೆಂಟರ ಮರ್ಜಿಯಡಿ ನಡೆಯುತ್ತಿತ್ತು. ಎಷ್ಟರ ಮಟ್ಟಿಗೆ ಎಂದರೆ, ರೈತರು ದಲ್ಲಾಳಿಗಳ ಕೈಯಿಂದ ಪಡೆದ ಸಾಲವನ್ನು ಮರು ಪಾವತಿ ಮಾಡಿದ ಬಳಿಕವೂ ಅನೇಕ ಬಾರಿ ಆರ್ತಿಯಾ ರೈತರ ಉತ್ಪನ್ನಗಳಿಗೆ ನೀಡಬೇಕಾದ ಬಾಕಿ ಮೊತ್ತವನ್ನು ನೀಡಲು ವಿಳಂಬ ಮಾಡುತ್ತಿತ್ತು ಎಂದು ಬೊಟ್ಟು ಮಾಡುತ್ತಾರೆ ದಿಲೀಪ್.
ದಿಲೀಪ್ ಅವರು ರೈತರ ಖಾತೆಗಳಿಗೆ ನೇರ ಬೆಂಬಲ ಬೆಲೆ ಪಡೆದ ಮೊದಲ ಮೂವರು ಪಂಜಾಬ್ ರೈತರಲ್ಲಿ ಒಬ್ಬರಾಗಿದ್ದಾರೆ .ಪಂಜಾಬ್‌ನ ರಾಜಕೀಯ ಪಕ್ಷಗಳು ಮತ್ತು ಮಧ್ಯವರ್ತಿಗಳು, ದಲ್ಲಾಳಿಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರಕಾರ ಪಂಜಾಬ್ ಸರಕಾರಕ್ಕೆ ನೀಡಿರುವ ಸೂಚನೆಯಂತೆ ರೈತರ ಭೂ ದಾಖಲೆಗಳ ಆಧಾರದ ಮೇಲೆ ರೈತರಿಗೆ ಇದೀಗ ಅವರ ಉತ್ಪನ್ನಗಳಿಗೆ ನೇರ ಬೆಂಬಲ ಬೆಲೆ ವರ್ಗಾವಣೆಯಾಗಲಾರಂಭಿಸಿದೆ. ಈವರೆಗೂ ಆರ್ಥಿಕವಾಗಿ ಬಲಿಷ್ಠರಾಗಿದ್ದ ದಲ್ಲಾಳಿಗಳ ಕಪಿಮುಷ್ಟಿಯಲ್ಲಿ ಹೈರಾಣಾಗಿದ್ದ ರೈತರಿಗೂ ಮೊದಲ ಬಾರಿಗೆ ಇಂತಹ ಒಂದು ಉತ್ತಮ ವ್ಯವಸ್ಥೆಯ ಅನುಭವ ನೇರವಾಗಿ ಆಗುತ್ತಿದ್ದು, ಇದರಿಂದ ಅವರು ಸಂತಸಗೊಂಡಿದ್ದಾರೆ.
ಇದೇ ರೀತಿ ರೊಪಾರ್ ಜಿಲ್ಲೆಯ ಛಾಮ್‌ಗೌರ್ ಸಾಹಿಬ್‌ನ ಭುರಾರ ಗ್ರಾಮದ ತ್ರಿಲೋಚನ್ ಸಿಂಗ್ (49)ಎಂಬ ರೈತರು ತನ್ನ ೧೨ಎಕರೆ ಭೂಮಿಯ ಪೈಕಿ ೩ಎಕರೆಯಲ್ಲಿ ಬೆಳೆದ ಗೋದಿಗಾಗಿ 1.56ಲ.ರೂ.ಗಳ ಬೆಂಬಲ ಬೆಲೆ ಪಡೆದಿದ್ದಾರೆ.ತಾನು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕೃಷಿ ಕಾಯಕದಲ್ಲಿ ತೊಡಗಿರುವ ರೈತನಾಗಿದ್ದೇನೆ.ಆದರೆ ಇದೇ ಮೊದಲ ಬಾರಿಗೆ ಈ ರೀತಿ ನೇರ ಬೆಂಬಲ ಪಡೆಯುತ್ತಿರುವುದು ನನ್ನಲ್ಲಿ ಅತ್ಯಂತ ಸಂತಸವನ್ನುಂಟು ಮಾಡಿದೆ. ಆದರೆ ಇದು ಆರ್ತಿಯಾಗಳ ಜೊತೆಗಿನ ನನ್ನ ಸಂಬಂಧಕ್ಕೆ ಧಕ್ಕೆಯನ್ನುಂಟು ಮಾಡದು ಎಂದು ಹೇಳುತ್ತಾರೆ.
ಹಾಗೆಯೇ ಲೂಯಾನದ ಹಳ್ಳಿಯೊಂದರ ರೈತ ಗುಲ್ಜಾರ್ ಸಿಂಗ್ (50)ಅವರು ತನ್ನ ೨೫ಎಕರೆಯ ಪೈಕಿ 20ಎಕರೆಯಲ್ಲಿ ಬೆಳೆದ ಗೋದಿಯ ಕೊಯ್ಲು ಮಾಡಿ ಪ್ರದೇಶದ ಅತ್ಯಂತ ದೊಡ್ಡ ಮಂಡಿಗಳಲ್ಲೊಂದಾದ ಖನ್ನಾ ಮಂಡಿಯಲ್ಲಿ ಮಾರಾಟ ಮಾಡಿದ್ದಾರೆ. ಈ ಮಾರಾಟದ ಬಳಿಕ ನನ್ನ ಬ್ಯಾಂಕ್ ಖಾತೆಗೆ ಹಣ ಬಂದಿದೆ.ಆದರೆ ನನಗೆ ಓದು ಬರಹ ಅರಿಯದು. ನಾಳೆ ನನ್ನ ಮಗ ಬರಲಿದ್ದು, ಎಷ್ಟು ಮೊತ್ತ ಖಾತೆಗೆ ಬಂದಿದೆ ಎಂಬುದನ್ನು ಆತ ನೋಡಿದ ಬಳಿಕ ಗೊತ್ತಾಗಲಿದೆ ಎನ್ನುತ್ತಾರೆ.
ಆದರೆ ಈ ಹೊಸ ವ್ಯವಸ್ಥೆಯಿಂದ ನಾನು ಅತ್ಯಂತ ಸಂತೃಪ್ತನಾಗಿದ್ದೇನೆ. ನಾನು 23ಎಕರೆ ಭೂಮಿಯನ್ನು ಲೀಸ್‌ಗೆ ತೆಗೆದುಕೊಂಡಿದ್ದು, ಸರಕಾರ ಭೂ ದಾಖಲೆ ಕೇಳಿದರೆ ನಾನು ಅದನ್ನು ಒದಗಿಸುವುದು ಹೇಗೆ ?ನನ್ನ ಭೂ ಮಾಲಿಕ ಅಮೆರಿಕದಲ್ಲಿದ್ದಾರೆ ಎಂದು ಮುಗ್ಧ ರೈತ ಕೇಳುತ್ತಾರೆ.
ಆದರೆ ಕೇಂದ್ರ ಸರಕಾರಕ್ಕೆ ಈ ಅಂಶ ಗಮನದಲ್ಲಿದ್ದು, ಅದು ಪಂಜಾಬ್ ಸರಕಾರಕ್ಕೆ ಹರ್ಯಾಣದ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದೆ. ಪಂಜಾಬ್‌ನ ರೈತರ ಪೈಕಿ ಅರ್ಧದಷ್ಟು ಮಂದಿ ಸ್ವಂತ ಭೂಮಿ ಹೊಂದಿಲ್ಲ. ಅವರು ಬೇರೆಯವರ ಭೂಮಿಯನ್ನು ಲೀಸ್‌ಗೆ ಪಡೆದುಕೊಂಡು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹರ್ಯಾಣ ಸರಕಾರ ಈಗಾಗಲೇ ಇಂತಹ ರೈತರ ಆಧಾರ್ ಕಾರ್ಡ್ ಮತ್ತು ಅವರು ಮಂಡಿಗಳಿಗೆ ಒಯ್ಯುವ ಬೆಳೆಯ ಪ್ರಮಾಣವನ್ನು ಆಧರಿಸಿ ಅವರಿಗೆ ಬೆಂಬಲ ಬೆಲೆಯನ್ನು ಒದಗಿಸಲು ಮುಂದಾಗಿರುವುದನ್ನು ಕೇಂದ್ರ ಸರಕಾರ ಪಂಜಾಬ್ ಸರಕಾರದ ಗಮನಕ್ಕೆ ತಂದಿದೆ.
ಈ ಪ್ರಯೋಗದ ಬಳಿಕ ಇದೀಗ ಪಂಜಾಬ್‌ನ ದೊಡ್ಡ ಪ್ರಮಾಣದ ರೈತರು ತಮ್ಮ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಪಡೆಯಲಾರಂಭಿಸಿದ್ದು, ರೈತರ ಖಾತೆಗಳಿಗೆ ಈಗಾಗಲೇ ಮೊತ್ತ ವರ್ಗಾವಣೆಯಾಗಲಾರಂಭಿಸಿದೆ ಎಂದು ಕೇಂದ್ರ ಆಹಾರ , ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ರವಿ ಭಗತ್ ತಿಳಿಸಿದ್ದಾರೆ.

ರೈತ ನಾಯಕನ ಹರ್ಷ !

ನಾನು ಮೊದಲ ಬಾರಿಗೆ ತನ್ನ ಬೆಳೆಗೆ ಯಾರದೇ ಅವಲಂಬನೆ ಇಲ್ಲದೆ ಬೆಂಬಲ ಬೆಲೆಯನ್ನು ಪಡೆದಿದ್ದು, ಇದು ರೈತನೊಬ್ಬನ ಜೀವನದಲ್ಲೇ ಅತ್ಯಂತ ಮಹತ್ವದ ದಿನವಾಗಿದೆ ಎಂದು ಡಾಕೌಂಡಾದ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ನ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಹರ್ಷ ವ್ಯಕ್ತಪಡಿಸುತ್ತಿರುವುದು , ಪಂಜಾಬ್‌ನ ರೈತರನ್ನು ಈ ವರೆಗೆ ಯಾವ ರೀತಿ ದಿಕ್ಕು ತಪ್ಪಿಸಲಾಗಿದೆ ಎಂಬುದಕ್ಕೆ ಒಂದು ಸಣ್ಣ ನಿದರ್ಶನವಷ್ಟೇ .

ರೈತರ ದಾರಿತಪ್ಪಿಸಿದ ಕಾಂಗ್ರೆಸ್‌ಗೆ ನೆಟ್ಟಿಗರಿಂದ ತರಾಟೆ
ಕೇಂದ್ರ ಸರಕಾರವು ಪಂಜಾಬ್‌ನ ರೈತರ ಖಾತೆಗಳಿಗೆ ನೇರ ಬೆಂಬಲ ಬೆಲೆ ವರ್ಗಾವಣೆ ಆರಂಭಿಸಿದ್ದು, ಇದರಿಂದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಂತೆಯೇ, ತನ್ನ ರಾಜಕೀಯ ಸ್ವಾರ್ಥಕ್ಕಾಗಿ ರೈತರನ್ನು ದಾರಿತಪ್ಪಿಸಿದ ಕಾಂಗ್ರೆಸ್ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಸದಾ ಆರ್ಥಿಕ ಬಲಿಷ್ಠರಾಗಿರುವ ಮಧ್ಯವರ್ತಿಗಳ ಕಪಿಮುಷ್ಟಿಯಲ್ಲೇ ಉಳಿಯುವಂತೆ ಮಾಡಲು ಕಾಂಗ್ರೆಸ್ ಮುಗ್ಧ ರೈತರನ್ನು ಕೇಂದ್ರ ಸರಕಾರದ ವಿರುದ್ಧ ಎತ್ತಿಕಟ್ಟಿ ಪ್ರತಿಭಟನೆಗೆ ಕಾರಣವಾಗಿರುವುದಕ್ಕಾಗಿ ನೆಟ್ಟಿಗರು ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸದಾ ರೈತರ ಪರವಾಗಿ ಇರುವಂತಹ ದೇಶದ ಮಂತ ನಾಯಕ ಎಂಬುದಾಗಿಯೂ ನೆಟ್ಟಿಗರು ಶ್ಲಾಘಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss