Wednesday, August 10, 2022

Latest Posts

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ತಿಂಗಳಿಗೊಮ್ಮೆ ಗ್ರಂಥಾಲಯ ಭೇಟಿ ಕಾರ್ಯಕ್ರಮ: ಜಿಲ್ಲಾಧಿಕಾರಿ ರಮೇಶ್

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕೊರೋನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ನಗರ ಹಾಗೂ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ತಿಂಗಳಿಗೊಮ್ಮೆ ಗ್ರಂಥಾಲಯ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಅವರು ಶನಿವಾರ ನಗರದ ಕೇಂದ್ರ ಗ್ರಂಥಾಲಯಕ್ಕೆ ದಿಢೀರ್ ಭೇಟಿ ನೀಡಿ ಕೋವಿಡ್ ಹಿನ್ನಲೆ ಓದುಗರು ಹಾಗೂ ಸಿಬ್ಬಂದಿಗಳ ಸುರಕ್ಷತೆ ದೃಷ್ಟಿಯಿಂದ ಗ್ರಂಥಾಲಯದಲ್ಲಿ ಕೈಗೊಂಡಿರುವ ಪಾಲನಾ ನಿಯಮಗಳು, ಪುಸ್ತಕಗಳ ಜೋಡಣೆ, ನಿರ್ವಹಣೆ, ಓದುಗರ ಕೊಠಡಿ, ಜತೆಗೆ ಗ್ರಂಥಾಲಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ ಕೊಠಡಿಯ ಪ್ರಗತಿ ಪರೀಶಿಲನೆ ನಡೆಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಲಾ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ವೃದ್ಧಿಸಬೇಕು ಎಂಬ ಉದ್ದೇಶ ಹೊಂದಿದ್ದು, ಜೊತೆಗೆ ಡಿಎಆರ್ ಪೊಲೀಸರು ತಮ್ಮ ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿದ್ದು ಶಾಲಾ-ಕಾಲೇಜುಗಳು ಆರಂಭಗೊಂಡಿರುವ ಕಾರಣ ಗ್ರಂಥಾಲಯಕ್ಕೆ ಓದುಗರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನಾರ್ಜನೆಗೆ ಆಗಮಿಸುತ್ತಿದ್ದಾರೆ. ಓದುಗರ ಸಂಖ್ಯೆಗೆ ಅನುಗುಣವಾಗಿ ಆಸನಗಳ ಹಾಗೂ ಸ್ಥಳಾವಕಾಶದ ಕೊರತೆ ಇದೆ ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಎಂಬ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ತೆರಳಲು ಸಾಧ್ಯವಾಗದ ಗ್ರಾಮೀಣ ಭಾಗಗಳಿಗೆ ಮೊಬೈಲ್ ಸಂಚಾರಿ ಗ್ರಂಥಾಲಯ ವಾಹನಗಳ ಮೂಲಕ ಮನೆ ಮನೆಗೆ ತಲುಪುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಪ್ರತಿಯೊಬ್ಬರಲ್ಲಿ ಓದುವ ಅಭಿರುಚಿಯನ್ನು ಬೆಳೆಸಲಾಗುತ್ತಿದೆ ಎಂದರು.
ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚು ಪ್ರಾಧನ್ಯತೆ ನೀಡುತ್ತಿದ್ದು ಇ-ಗ್ರಂಥಾಲಯ ಆ್ಯಪ್ ಮೂಲಕ ಮೊಬೈಲ್‍ನಲ್ಲಿಯೇ ಕಥೆ, ಸಾಹಿತ್ಯ, ಕವನಸಂಕಲನ ಮುಂತಾದ ಪುಸ್ತಕಗಳನ್ನು ಸುಲಭವಾಗಿ ಓದಬಹುದಾಗಿದೆ. ಹೆಚ್ಚುವರಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಇದು ನಿರ್ಮಾಣವಾದಲ್ಲಿ ಓದುಗರಿಗೆ ಸ್ಥಳಾವಕಾಶದ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಬ್ರಿಟಿಷ್ ಕಾಲದ ಹಲವು ಸಂಗ್ರಹ ಪುಸ್ತಕ ಹಾಗೂ ಪುರಾತನ ಕಾಲದ ತಾಳೆಗರಿಗಳು, ಕವಿಗಳ ಬರಹಗಳನ್ನು ಇಲ್ಲಿ ಸಂಗ್ರಹಿಸಲಾಗಿದ್ದು ಹೆಚ್ಚು ಮೂಲಭೂತ ಸೌಲಭ್ಯದೊಂದಿಗೆ ಮಾದರಿ ಗ್ರಂಥಾಲಯವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಉಮೇಶ್ ಮಾತನಾಡಿ ಇಲ್ಲಿನ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಜ್ಞಾನಾರ್ಜನೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸ್ಥಳಾವಕಾಶದ ಕೊರತೆ ಇದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಂಥಾಲಯಕ್ಕೆ ಬೇಕಾಗಿರುವ ಅಗತ್ಯತೆಗಳ ಕುರಿತು ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು ಅಭಿವೃದ್ಧಿ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸ್ಥಳಾವಕಾಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಪೂರಕವಾಗಿ ಹೆಚ್ಚುವರಿ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮುಖ್ಯವಾಗಿ ನಗರ ಕೇಂದ್ರ ಗ್ರಂಥಾಲಯದಿಂದ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
ಗ್ರಂಥಾಲಯದಲ್ಲಿ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರದೊಂದಿಗೆ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಜ್ವರ, ಶೀತ, ಕೆಮ್ಮು ಮುಂತಾದ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ನಿಷೇಧವಿದ್ದು ಥರ್ಮಲ್ ಸ್ಕ್ಯಾನರ್ ತಪಾಸಣೆ ಮೂಲಕ ಓದುಗರಿಗೆ ಗ್ರಂಥಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದರು.
ಕೋವಿಡ್ ಹಿನ್ನಲೆ ಈಗಾಗಲೇ ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚು ಒತ್ತು ನೀಡಿದ್ದು, ಸಾರ್ವಜನಿಕ ಇ ಗ್ರಂಥಾಲಯದಲ್ಲಿ ನೋಂದಣಿಯಾಗುವ ಮೂಲಕ ಇ-ಪುಸ್ತಕಗಳು, ಸ್ಪರ್ಧಾತ್ಮಕ, ಶೈಕ್ಷಣಿಕ, ಕಥೆ, ಸಾಹಿತ್ಯದ ಪುಸ್ತಕಗಳನ್ನು ಓದಬಹುದಾಗಿದೆ ಇಲ್ಲಿ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯ ಸಮಿತಿ ಸದಸ್ಯ ರವೀಶ್ ಕ್ಯಾತನಬೀಡು, ಸಿಬ್ಬಂದಿಗಳಾದ ಸಿದ್ದಪ್ಪ, ಮಹೇಶ್, ಶಂಕರೇಗೌಡ, ಮಂಜುನಾಥಸ್ವಾಮಿ, ರೂಪಾ, ವೀಣಾ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss