Sunday, August 14, 2022

Latest Posts

ಅನಧಿಕೃತ ದೇವಾಲಯಗಳ ಸಕ್ರಮಕ್ಕೆ ಸೆ.23ರಂದು ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡನೆ: ಶಾಸಕ ಎಸ್.ಎ.ರಾಮದಾಸ್

ಹೊಸದಿಗಂತ ವರದಿ, ಮೈಸೂರು:

ರಾಜ್ಯದಲ್ಲಿರುವ ಅನಧಿಕೃತ ದೇವಾಲಯಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ತಾವು ಸೆ.23ರಂದು ವಿಧಾನಸಭೆಯ ಅಧಿವೇಶನದಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಲಿದ್ದೇನೆ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ದೇವಸ್ಥಾನವೊಂದನ್ನು ತೆರವುಗೊಳಿಸುವ ಪ್ರಕರಣ ಸಂಬoಧ ಸುಪ್ರೀಂಕೋರ್ಟ್ ಮಧ್ಯಾಂತರ ಆದೇಶವನ್ನು ನೀಡಿದೆ. ಕರ್ನಾಟಕ ರಾಜ್ಯ ಹೊರತುಪಡಿಸಿ, ದೇಶದ ಬಹುತೇಕ ರಾಜ್ಯಗಳು ದೇವಸ್ಥಾನಗಳನ್ನು ಸಕ್ರಮಗೊಳಿಸಿದ ವಿಧೇಯಕಗಳನ್ನು ಮಾಡಿ, ಅವುಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿವೆ. ಆದರೆ ಕರ್ನಾಟಕ ರಾಜ್ಯದಿಂದ ಮಾತ್ರ ಸಲ್ಲಿಕೆಯಾಗಿಲ್ಲ, ಕೇವಲ ಪ್ರಮಾಣ ಪತ್ರವನ್ನು ಮಾತ್ರ ಸಲ್ಲಿಸಲಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ದೇವಾಲಯಗಳ ತೆರವಿನ ಬಿಕ್ಕಟ್ಟುವುಂಟಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 2818 ದೇವಾಲಯಗಳಿವೆ. ಈ ಪೈಕಿ ರಸ್ತೆ ಮಧ್ಯೆಇರುವ, ಓಡಾಟಕ್ಕೆ ಸಮಸ್ಯೆಯಾಗಿರುವ ದೇವಸ್ಥಾನಗಳನ್ನು ಬಿಟ್ಟು, ಉಳಿದ ದೇವಾಲಯಗಳನ್ನು ಕಾನೂನು ಬದ್ಧವಾಗಿಯೇ ಸಕ್ರಮಗೊಳಿಸಬೇಕೆಂಬ ಉದ್ದೇಶದಿಂದ 10 ಅಂಶಗಳನ್ನು ಒಳಗೊಂಡ ಖಾಸಗಿ ವಿಧೇಯಕವನ್ನು ನಾನು ತಯಾರಿಸಿದ್ದು, ಇದನ್ನು ಈಗಾಗಲೇ ವಿಧೇಯಕಗಳ ಪರಿಶೀಲನಾ ಸಮಿತಿಗೆ ಸಲ್ಲಿಸಿದ್ದೇನೆ. ಸಮಿತಿಯವರು ಪರಿಶೀಲನೆ ಮಾಡುತ್ತಿದ್ದಾರೆ. ಕೆಲವೊಂದು ತಿದ್ದುಪಡಿಗಳನ್ನು ಮಾಡಬಹುದು, ಇಲ್ಲವೇ ಮತ್ತಷ್ಟು ಅಂಶಗಳನ್ನು ಇದಕ್ಕೆ ಸೇರಿಸಬಹುದು. ಸಿದ್ಧವಾದ ವಿಧೇಯಕ ವಿಧಾನಸಭಾಧ್ಯಕ್ಷರ ಬಳಿಗೆ ಹೋಗಲಿದೆ. ಈಗಾಗಲೇ ಅವರಿಗೂ ನಾನು ಖಾಸಗಿ ವಿಧೇಯಕದ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ, ಅವರು ಸೆ.23 ರಂದು ಇದನ್ನು ವಿಧಾನಸಭೆಯ ಅಧಿವೇಶನದಲ್ಲಿ ಮಂಡನೆಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೂ ಸಹ ವಿಧೇಯಕದ ಪ್ರತಿಯನ್ನು ನೀಡಿದ್ದೇನೆ. ಅಲ್ಲದೇ ಸೆ.20ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ, ವಿಧೇಯಕ ಪಾಸ್ ಆಗಲು ಸಹಕರಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ನಾನು ಕೊಟ್ಟಿರುವ ಈ ವಿಧೇಯಕವನ್ನು ಸರ್ಕಾರವೇ ಅಂಗೀಕರಿಸಿ, ಅದನ್ನು ಜಾರಿಗೆ ತರುವ ಸಾಧ್ಯತೆಗಳು ಕೂಡ ಇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮವಹಿಸಬೇಕಾಗಿದೆ ಎಂದರು. ಈ ವಿಧೇಯಕ ಅಧಿವೇಶನದಲ್ಲಿ ಅಂಗೀಕಾರವಾದರೆ 2009ರ ನಂತರವೂ ನಿರ್ಮಾಣಗೊಂಡಿರುವ ಅನಧಿಕೃತ ದೇವಸ್ಥಾನಗಳನ್ನು ಸಕ್ರಮಗೊಳಿಸಲಾಗುತ್ತದೆ. ಈ ದೇವಸ್ಥಾನಗಳಿಗೆ ಕಾನೂನಿನ ಬಲ ಕೂಡ ಸಿಗಲಿದೆ. ಅಂಗೀಕಾರಗೊoಡ ವಿಧೇಯಕವನ್ನು ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಬಹುದಾಗಿದೆ. ಅಲ್ಲದೇ ಇನ್ನು ಮುಂದೆ ಅನಧಿಕೃತವಾಗಿ ದೇವಸ್ಥಾನ ನಿರ್ಮಾಣ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶ, ಇದಕ್ಕಾಗಿ ಸಕ್ಷಮ ಪ್ರಾಧಿಕಾರ ರಚನೆ, ಅದರ ಅಧಿಕಾರ ವ್ಯಾಪ್ತಿ ಮುಂತಾದ ಎಲ್ಲಾ ಅಂಶಗಳನ್ನು ಈ ವಿಧೇಯಕ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿ 2009ರ ಹಿಂದೆ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ದೇವಸ್ಥಾನ, ಮಂದಿರ, ಮಸೀದಿಗಳ ಕುರಿತು, ಆಗ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರು ಪಟ್ಟಿಯನ್ನು ಮಾಡಿದ್ದರು. ಆ ಪಟ್ಟಿಯಲ್ಲಿ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಪ್ಪ ದೇವಸ್ಥಾನವಿರಲಿಲ್ಲ. ಹೀಗಿದ್ದರೂ ಆ ದೇವಸ್ಥಾನವನ್ನು ಅಧಿಕಾರಿಗಳು ಧ್ವಂಸ ಮಾಡಿದ್ದಾರೆ. ಅನಧಿಕೃತವಾಗಿ ನಿರ್ಮಾಣವಾಗಿರುವ ಪ್ರತಿಯೊಂದು ದೇವಸ್ಥಾನದ ಬಗ್ಗೆ ಪ್ರತ್ಯೇಕವಾದ ಕಡತವನ್ನು ತಯಾರಿಸಿ, ಆ ಮೂಲಕ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss