Sunday, April 11, 2021

Latest Posts

2ನೇ ದಿನವೂ ರಸ್ತೆಗಿಳಿಯದ ಬಸ್ಸುಗಳು: ಸಾರಿಗೆ ಸಂಸ್ಥೆ ನಿಲ್ದಾಣದಲ್ಲಿ ಕಾಣಿಸಿಕೊಂಡ ಖಾಸಗಿ ಬಸ್ಸುಗಳು

ಹೊಸದಿಗಂತ ವರದಿ,ಕೋಲಾರ:

ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಮುಷ್ಕರದಿಂದ ೨ನೇ ದಿನವೂ ಕೋಲಾರ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳು ಡಿಪೋದಲ್ಲೇ ನಿಂತಿದ್ದು,ಬಾಗಿಲ್ಲಿ ಪೊಲೀಸರು ಕಾವಲು ಹಾಕಲಾಗಿತ್ತು.
ಇದರಿಂದ ಜಿಲ್ಲಾ ಕೇಂದ್ರ ಸೇರಿದಂತೆಬಹುತೇಕ ತಾಲೂಕುಗಳಲ್ಲಿ ಬಸ್ ನಿಲ್ದಾಣಗಳು ಭಿಕೋ ಎನ್ನುತ್ತಿದ್ದವು. ಆದರೆ ಒಂದೆರಡು ಖಾಸಗಿ ಬಸ್ಸುಗಳು ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡವು.
ಸಾರಿಗೆ ನೌಕರರ ಮುಷ್ಕರದ ಅರಿವಿಲ್ಲದೆ ಲಗ್ಗೇಜುಗಳೊಂದಿಗೆ ಆಗಮಿಸಿದ್ದ ಕೆಲವೇ ಪ್ರಯಾಣಿಕರು ಖಾಸಗಿ ಬಸ್ಸುಗಳನ್ನು ಮತ್ತು ವಾಹನ, ಆಟೋಗಳನ್ನು ಅವಲಂಬಿಸಿ ಪ್ರಯಾಣಕ್ಕೆ ಸಜ್ಜಾಗುತ್ತಿದ್ದರು.
ಸಾರಿಗೆ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನ ಚಾಲಕರು ಆಟೋಗಳು, ಕಾರು, ಒಪ್ಪಂದದ ಅನುಮತಿ ಹೊಂದಿದ್ದ ಬಸ್ಸುಗಳು ಯಾವುದೇ ಅಂಜಿಕೆ ಇಲ್ಲದೆ ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ವಸೂಲು ಮಾಡಿದವು.
ಬಹುತೇಕ ಪ್ರಯಾಣಿಕರು ಮುಷ್ಕರವನ್ನು ನಿರೀಕ್ಷಿಸಿ ಬೈಕ್,ಕಾರು, ಖಾಸಗಿ ಬಸ್ಸುಗಳಲ್ಲದೆ ಸ್ವಂತ ವಾಹನಗಳಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರಿಂದಾಗಿ ಅಷ್ಟಾಗಿ ಸಮಸ್ಯೆ ಕಂಡು ಬರಲಿಲ್ಲ.
ಸರಕಾರ ಮುಷ್ಕರ ನಿರತ ನೌಕರರ ಮೇಲೆ ಎಸ್ಮಾ ಜಾರಿಗೆಮಾಡುವ ಕುರಿತು ಪ್ರಸ್ತಾಪಿಸಿದ್ದರೂ ಅದಕ್ಕೂ ನೌಕರರು ಕ್ಯಾರೆ ಎನ್ನುವ ಹಾಗೆ ಕಂಡು ಬರಲಿಲ್ಲ.
ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗುವುದನ್ನು ತಡೆಯುವ ಸಲುವಾಗಿ ಕೋಲಾರ ಮತ್ತು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಸಿಬ್ಬಂದಿಯನ್ನು ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಸಾರಿಗೆ ಮುಷ್ಕರದ ಎರಡನೇ ದಿನವೂ ಕೋಲಾರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿದ್ದು ಕಂಡು ಬರಲಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss