Sunday, August 14, 2022

Latest Posts

ಬ್ಯಾಡಗೊಟ್ಟ ಗ್ರಾಮದ ಕಸ ವಿಲೇವಾರಿ ಘಟಕ ಸ್ಧಳಕ್ಕೆ ಅಧಿಕಾರಿಗಳ ಭೇಟಿ

ದಿಗಂತ ವರದಿ ಕುಶಾಲನಗರ:

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಸಮೀಪ ನಿರ್ಮಿಸಲುದ್ದೇಶಿಸಿರುವ ಕಸ ವಿಲೇವಾರಿ ಘಟಕದ ಜಾಗಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮತ್ತು ಜನಪ್ರತಿನಿಧಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಳೆದ ಎರಡು ವರ್ಷಗಳ ಹಿಂದೆ ಸರ್ವೆ ನಂಬರ್‌ 11 ರಲ್ಲಿ 60 ಸೇಂಟ್ ಜಾಗವನ್ನು ಗುರುತಿಸಿ ಆ ಜಾಗದಲ್ಲಿ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದವರ ಮನೆಗಳ ಕಸವನ್ನು ಹಾಕುವುದಕ್ಕೆ ಅನುಕೂಲವಾಗಲೆಂದು ಆಗಿನ ಜಿಲ್ಲಾಧಿಕಾರಿಯವರು ಜಿಲ್ಲಾ ಪಂಚಾಯತ್ ಮೂಲಕ 11 ಲಕ್ಷ ರೂ.ಹಣ ಬಿಡುಗಡೆ ಮಾಡಿಸಿದ್ದರು. ಈ ಕಾಮಗಾರಿಯ ಕ್ರಿಯಾ ಯೋಜನೆ ಸಿದ್ಧವಾಗಿ ಕಸ ವಿಲೇವಾರಿ ಘಟಕದ ಕಾಮಗಾರಿ ಆರಂಭ ಮಾಡಬೇಕನ್ನುವಷ್ಟರಲ್ಲಿ ಪುನರ್ವಸತಿ ಕೇಂದ್ರದ ನಿವಾಸಿಗಳು ಈ ಜಾಗದಲ್ಲಿ ಕಸ ವಿಲೇವಾರಿ ಮಾಡಬಾರದೆಂದು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದರೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು.
ಆದರೆ ಕಸ ವಿಲೇವಾರಿ ಘಟಕ ಆರಂಭಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತ ಗ್ರಾಮ ಪಂಚಾಯತ್ ನಿಂದ ಮಾಹಿತಿಯನ್ನು ಬಯಸಿದ್ದು, ಅದರನ್ವಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೇಗೌಡ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಯಿಷಾ , ಅನೇಕ ಸದಸ್ಯರು ಮತ್ತು ಸಿಬ್ಬಂದಿ ವರ್ಗದರು ನಿಗದಿತ ಸ್ಧಳಕ್ಕೆ ತೆರಳಿ ಪರಿಶೀಲನೆ ನಡೆಸಿದರು
ಈ ನಡುವೆ ಕಸ ವಿಲೇವಾರಿ‌ ಘಟಕ ಸ್ಥಾಪನೆ ವಿರೋಧಿಸಿ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ 350 ಕುಟುಂಬಗಳ ಸದಸ್ಯರು ಸಭೆ ನಡೆಸಿದ್ದು, ಶುಕ್ರವಾರ ಜಿಲ್ಲಾಧಿಕಾರಿನವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಈ ಸಂದರ್ಭ ಸಮರ್ಪಕವಾದ ಉತ್ತರ ದೊರಕದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲೂ ನಿರ್ಧರಿಸಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಯಿಷಾ ಅವರ ಅಭಿಪ್ರಾಯ ಬಯಸಿದಾಗ, ಕಸ ವಿಲೇವಾರಿ ಘಟಕ ಆರಂಭಿಸುವಂತೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ. ಈ ಕೇಂದ್ರದಲ್ಲಿ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸುವುದಲ್ಲದೆ, ಗ್ರಾಮ ಪಂಚಾಯತ್ ವ್ಯಾಪ್ತಿಯ ಇತರೆ ಕಸವನ್ನು ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಕಸ ವಿಲೇವಾರಿ ಘಟಕದ ಕೇಂದ್ರದಲ್ಲಿ ಹಾಕಲಾಗುವುದು. ಯಾವುದೇ ರೋಗ ರುಜಿನ ಬಾರದಂತೆ ಸರಕಾರದ ನಿಯಮಾನುಸಾರ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಂತೆ ಸೂಚನೆ ಇರುವುದರಿಂದ , ಮತ್ತು ಸ್ಧಳ ಗುರುತು ಮಾಡಿರುವುದರಿಂದ ಘಟಕ ಆರಂಭಿಸಲು ಸಿದ್ಧತೆ ಮಾಡಲಾಗುವುದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss