ಹೊಸದಿಗಂತ ವರದಿ, ತುಮಕೂರು:
ತುಮಕೂರು ಮಹಾನಗರಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆಯುಕ್ತರೆ ಭ್ರಷ್ಟಾಚಾರ ಮಾಡುವವರಿಗೆ ಪೋಷಕರಾಗಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪಾಲಿಕೆ ಅಧಿಕಾರಿಗಳು ನರಭಕ್ಷಕರಂತೆ ವರ್ತಿಸುತ್ತಾರೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿಗೆ ಮನೆನಿರ್ಮಾಣ ಪರವಾನಗಿಗೆ ಅರ್ಜಿ ಸಲ್ಲಿಸಿದರೆ ಜನತೆ ಸಲ್ಲಿಸಿದ ಕಡತಗಳಲ್ಲಿ ಕೆಲವು ದಾಖಲೆಗಳನ್ನು ಕಿತ್ತು ಹಾಕಿ ಮತ್ತೆ ದಾಖಲೆ ತರುವಂತೆ ಒತ್ತಡ ಹಾಕುತ್ತಾರೆ.ಈ ಸಂದರ್ಭದಲ್ಲಿ ಲಂಚದ ಮಾತುಕತೆ ನಡೆಸುತ್ತಾರೆ ಎಂದು ಆರೋಪಿಸಿದರು.
ಬಿಜೆಪಿ ಯವರೇ ಮೇಯರ್ ಆಗಿದ್ದರೂ ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯ ಹರಿಶ್ಚಂದ್ರರಲ್ಲ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಚಿಕ್ಕಪೇಟೆ, ಮಂಡಿಪೇಟೆ, ಜೆ.ಸಿ.ರಸ್ತೆಯ ಕಾಮಗಾರಿಗಳು ಆರಂಭವಾಗಿ ವರ್ಷಗಳೇ ಕಳೆದರೂ ಮುಗಿದಿಲ್ಲ. ಅಲ್ಲಿನ ವ್ಯಾಪಾರಿಗಳು ಒಂದು ವರ್ಷದಿಂದ ದೂಳು ಕುಡಿಯುತ್ತಿದ್ದಾರೆ. ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಈ ಎಲ್ಲ ಅಕ್ರಮಗಳ ಬಗ್ಗೆ ತಾವು ಜನಜಾಗೃತಿ ಮೂಡಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.