ಸರಣಿ ಅಗ್ನಿ ಅವಘಡ; 1,441 ಎಲೆಕ್ಟ್ರಿಕ್ ಬೈಕ್‌ ಹಿಂಪಡೆಯುವುದಾಗಿ ಓಲಾ ಕಂಪನಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಲೆಕ್ಟ್ರಿಕ್‌ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಸಾಲು ಸಾಲು ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿವೆ. ಭವಿಷ್ಯದ ವಾಹನಗಳು ಎಂದೇ ಪರಿಗಣಿತವಾದ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಜನರೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ ಈ ನಡುವೆ ಇವುಗಳ ಬ್ಯಾಟರಿ ಸ್ಪೋಟ ಪ್ರಕರಣಗಳು ಗ್ರಾಹಕರಲ್ಲಿ ಆತಂಕ ಹುಟ್ಟಿಸಿವೆ.
ಈ ಹಿನ್ನೆಲೆಯಲ್ಲಿ ತಾನೂ ಮಾರಾಟ ಮಾಡಿದ್ದ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆಯುವುದಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಪ್ರಕಟಿಸಿದೆ.
ತನ್ನ ಅನೇಕ ಎಲೆಕ್ಟ್ರಿಕ್‌ ಬೈಕ್‌ ಗಳಲ್ಲಿ ಬೆಂಕಿ ಕಾಣಸಿಕೊಂಡ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಕಂಪನಿಯ ಈ ನಿರ್ಣಯ ಹೊರಬಿದ್ದಿದೆ. ಅಲ್ಲದೆ ಮಾರ್ಚ್ 26 ರಂದು ಪುಣೆಯಲ್ಲಿ ಬೈಕ್‌ ಗೆ ಬೆಂಕಿ ಹೊತ್ತಿಕೊಂಡ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಓಲಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಸ್ಕೂಟರ್‌ ಗಳ ಸೂಕ್ತ ಪರಿಶೀಲನೆ ಅಗತ್ಯವಿದೆ. ಹಾಗಾಗಿ ನಾವು ನಿರ್ದಿಷ್ಟ ಬ್ಯಾಚ್‌ನಲ್ಲಿ ಬಿಡುಗಡೆ ಮಾಡಿದ ಎಲ್ಲಾ 1,441 ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದೇವೆ. ಈ ಸ್ಕೂಟರ್‌ಗಳಲ್ಲಿರುವ ದೋಷಗಳನ್ನು ನಮ್ಮ ಇಂಜಿನಿಯರ್‌ಗಳು ಪರಿಶೀಲಿಸಲಿದ್ದಾರೆ. ಬೈಕ್‌ ನ ಬ್ಯಾಟರಿ ವ್ಯವಸ್ಥೆ, ಥರ್ಮಲ್ ಸಿಸ್ಟಮ್‌ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿ ಲೋಪವೇನಿದೆ ಎಂಬುದನ್ನು ಆದಷ್ಟು ಶೀಘ್ರವಾಗಿ ಪತ್ತೆಹಚ್ಚಿ ಸರಿಪಡಿಸಲಾಗುವುದು ಎಂದು ಕಂಪನಿ ಹೇಳಿದೆ.
ಸ್ಫೋಟ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಈ ಬಗ್ಗೆ ತನಿಖೆಗೆ ತಜ್ಞರ ಸಮಿತಿಯೊಂದನ್ನು ನೇಮಿಸಿದೆ. ಅಲ್ಲದೆ ಇಂತಹ ಘಟನೆಗಳು ಸಂಭವಿಸಿದಾಗ ಕಂಪನಿಗಳು ನಿರ್ಲಕ್ಷ್ಯ ತೋರಿದರೆ ದೊಡ್ಡ ಮೊತ್ತದ ದಂಡ ವಿಧಿಸುವುದಾಗಿ ಎಚ್ಚರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!