ಹೊಸದಿಗಂತ ವರದಿ, ಮಂಡ್ಯ:
ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ನಗರದ ಕಲ್ಲಹಳ್ಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಡೆದಿದೆ.
ತಾಲೂಕಿನ ಯಲಿಯೂರು ಗ್ರಾಮದ ರಾಮಕೃಷ್ಣ ಎಂಬುವರ ಮಗ ರಕ್ಷಿತ್ (21) ಎಂಬಾತನೇ ಹತ್ಯೆಯಾದ ಯುವಕ. ಈತನ ಮೇಲೆ ಹೊಳಲು ಗ್ರಾಮದ ಜುಟ್ಟುಘಿ, ಮಾದ, ತೇಜಸ್ ಸೇರಿ ನಾಲ್ಕು ಮಂದಿ ಯುವಕರ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದೆ ಎನ್ನಲಾಗಿದೆ.
ಘಟನೆ ವಿವರ:
ಯಲಿಯೂರು ಗ್ರಾಮದ ರಕ್ಷಿತ್ ಹಾಗೂ ಹೊಳಲು ಗ್ರಾಮದ ಜುಟ್ಟು ಮತ್ತಿತರರ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆಯೂ ತಾಲೂಕಿನ ಶಿವಳ್ಳಿ ಭಾರತ್ ಚಿತ್ರಮಂದಿರದ ಬಳಿಯೂ ಜಗಳ ನಡೆದಿತ್ತು ಎನ್ನಲಾಗಿದೆ.
ಈ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 11-30ರ ಸಮಯದಲ್ಲಿ ರಕ್ಷಿತ್ ಜಿಮ್ನಲ್ಲಿ ವರ್ಕೌಟ್ ಮಾಡಿ ವಾಪಸ್ಸು ಮನೆಗೆ ತೆರಳುತ್ತಿದ್ದಾಗ ಕಲ್ಲಹಳ್ಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಆರೋಪಿಗಳು ಅಡ್ಡಗಟ್ಟಿ ಆತನ ಹೊಟ್ಟೆಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಕೆಳಗೆ ಬಿದ್ದು ಕಿರುಚಾಡುತ್ತಿದ್ದ ಶಬ್ಧದಿಂದ ಎಚ್ಚೆತ್ತ ಸ್ಥಳೀಯರು ತಕ್ಷಣ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೊಂಡೊಯ್ಯುತ್ತಿದ್ದ ಮಾರ್ಗ ಮಧ್ಯೆ ರಕ್ಷಿತ್ ಮೃತಪಟ್ಟಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷ ಎನ್. ಯತೀಶ್, ಎಎಸ್ಪಿ ಧನಂಜಯ, ಡಿವೈಎಸ್ಪಿ ಮಂಜುನಾಥ್, ಇನ್ಸ್ಪೆಕ್ಟರ್ ರಮೇಶ್ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದುಘಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.