ನಾಯಿ ವಿಷಯವಾಗಿ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಾಕು ನಾಯಿಯನ್ನು ಕರೆದುಕೊಂಡು ಮನೆ ಮುಂದೆ ಬಂದು ಗಲೀಜು ಮಾಡಿಸಬೇಡಿ ಎಂದು ಆಕ್ಷೇಪಿಸಿದ್ದಕ್ಕೆ ವ್ಯಕ್ತಿಯನ್ನು ಥಳಿಸಿ ಕೊಲೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೋಲದೇವನಹಳ್ಳಿಯ ಗಣಪತಿನಗರ ನಿವಾಸಿ 67 ವರ್ಷದ ಮುನಿರಾಜು ಕೊಲೆಯಾದ ವೃದ್ಧ. ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಮುರುಳಿ ಎನ್ನುವವರು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಕೃತ್ಯವೆಸಗಿದ ಸಂಬಂಧ ಪ್ರಮೋದ್, ರವಿಕುಮಾರ್ ಹಾಗೂ ಈತನ ಪತ್ನಿ ಪಲ್ಲವಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ಶನಿವಾರ ಈ ದುರ್ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯಲಹಂಕ ಮೂಲದ ಮುನಿರಾಜು ಕಳೆದ ಮೂರು ವರ್ಷಗಳಿಂದ ಗಣಪತಿ ನಗರದಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದರು‌. ಅದೇ ಏರಿಯಾದಲ್ಲಿ ರವಿಕುಮಾರ್ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ನಾಯಿಗಳನ್ನ ಸಾಕಿಕೊಂಡಿದ್ದರು‌. ಸ್ನೇಹಿತ ಪ್ರಮೋದ್ ಜೊತೆಗೆ ರವಿ ಆಗಾಗ ನಾಯಿಗಳನ್ನು ಮುನಿರಾಜು ಅವರ ಮನೆ ಮುಂದೆ ಕರೆದೊಯ್ದು ಮಲ – ಮೂತ್ರ ಮಾಡಿಸುತ್ತಿದ್ದ. ಅಲ್ಲದೇ ಅದೇ ಜಾಗದಲ್ಲಿ ಸಿಗರೇಟು ಸೇದುತ್ತಿದ್ದ ಎಂದು ರವಿ ಮತ್ತು ಮುನಿರಾಜುರ ನಡುವೆ ಹಲವು ಬಾರಿ ಮಾತಿನ ಸಂಘರ್ಷ ನಡೆದಿತ್ತು‌‌. ಈ ಸಂಬಂಧ ಮುನಿರಾಜು ಪೊಲೀಸ್​ ಠಾಣೆಗೆ ತೆರಳಿ ದೂರು ಸಹ ನೀಡಿದ್ದರು. ಠಾಣೆಯಲ್ಲಿ ಇಬ್ಬರನ್ನೂ ಕರೆದು ಬುದ್ದಿ ಹೇಳಿ ಮುಚ್ಚಳಿಕೆ ಬರೆಸಲಾಗಿತ್ತು ಎಂದು ತಿಳಿದುಬಂದಿದೆ.

ಠಾಣೆಗೆ ಹೋಗಿ ಬಂದ ಮರುದಿನವೇ ಮತ್ತೆ ಗಲಾಟೆಯಾಗಿದ್ದು, ಗಲಾಟೆಯ ವೇಳೆ ಪ್ರಮೋದ್‌ ಮತ್ತು ರವಿಕುಮಾರ್‌ ದೊಣ್ಣೆಯಿಂದ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!