ಹೊಸದಿಗಂತ ವರದಿ, ಕಾಸರಗೋಡು:
28 ವರ್ಷಗಳ ಹಿಂದೆ ಹೆತ್ತವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ 65 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯು ಕಳೆದ 25 ವರ್ಷಗಳ ಕಾಲ ಮಾನಸಿಕ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ವಿಚಾರಣೆ ನಡೆದು ತೀರ್ಪು ಹೊರಬರಲು ಸುದೀರ್ಘ ವರ್ಷ ಬೇಕಾಯಿತು.
ಅಂದು ಕೂಲಿ ಕಾರ್ಮಿಕನಾಗಿದ್ದ ಆರೋಪಿ ಸದಾಶಿವ ಎಂಬಾತ 1993ರ ಮಾರ್ಚ್ 22ರಂದು ಮಂಜೇಶ್ವರ ಮೀಯಪದವು ಸಮೀಪದ ತಲೆಕಳ ಗ್ರಾಮದ ಮನೆಯಲ್ಲಿ ತನ್ನ ಹೆತ್ತವರಾದ 63 ವರ್ಷದ ಮಾಂಕು ಮೂಲ್ಯ ಮತ್ತು 53 ವರ್ಷದ ಲಕ್ಷ್ಮೀ ಎಂಬವರನ್ನು ಕೊಚ್ಚಿ ಕೊಲೆ ಮಾಡಿದ್ದನು.
ಇಷ್ಟು ವರ್ಷ ವಿಚಾರಣೆ ನಡೆಸಿ ಸದಾಶಿವ ಅಪರಾಧಿ ಎಂದು ತೀರ್ಪು ನೀಡಿದ ಕಾಸರಗೋಡು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಉಣ್ಣಿಕೃಷ್ಣನ್ ಎ.ವಿ. ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
1993ರ ಮಾರ್ಚ್ 22ರಂದು ಮಧ್ಯಾಹ್ನ ಸದಾಶಿವನ ತಾಯಿ ರೇಡಿಯೋದ ಶಬ್ದವನ್ನು ಕಡಿಮೆ ಮಾಡುವಂತೆ ಕೇಳಿದಾಗ ತೀವ್ರವಾಗಿ ಜಗಳವಾಡಿದ್ದನು. ನಂತರ ಅದೇ ದಿನ ರಾತ್ರಿ ಗಂಟೆ ಸುಮಾರಿಗೆ ಆತನಿಗೆ ಹೆತ್ತವರ ಜೊತೆ ವಾಗ್ವಾದ ನಡೆದಿತ್ತು. ಅಲ್ಲದೆ ಸಿಟ್ಟಿನಲ್ಲಿ ಕೊಡಲಿಯಿಂದ ತಂದೆ ತಾಯಿಯನ್ನು ಕೊಚ್ಚಿ ಕೊಲೆ ಮಾಡಿದ್ದನು.
ಕೃತ್ಯವನ್ನು ಸದಾಶಿವನ ಪತ್ನಿ ಮತ್ತು ಸುಮಾರು 5 ಹಾಗೂ 4 ವರ್ಷ ವಯಸ್ಸಿನ ಇಬ್ಬರು ಮಕ್ಕಳು ನೋಡಿದ್ದರು. ಅವರು ಕಿರುಚಿದಾಗ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಸದಾಶಿವನ ಸಹೋದರ ಮತ್ತು ಆತನ ಪತ್ನಿ ಓಡಿ ಬಂದು ಕೊಡಲಿ ಹಿಡಿದು ನಿಂತಿದ್ದನ್ನು ಕಂಡಿದ್ದರು. ಸದಾಶಿವನ ಪತ್ನಿ ಸೇರಿದಂತೆ ಎಲ್ಲರೂ ಸದಾಶಿವನ ವಿರುದ್ಧ ಸಾಕ್ಷಿ ಹೇಳಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ರಾಘವನ್ ತಿಳಿಸಿದ್ದಾರೆ.
ಸದಾಶಿವನು ಬಂಧನಕ್ಕೊಳಗಾದ ಕೂಡಲೇ ಪೂರ್ಣವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದನು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಆತನನ್ನು ಕಲ್ಲಿಕೋಟೆ ಸಮೀಪದ ಕುತಿರವತ್ತಂ ಎಂಬಲ್ಲಿನ ಸರಕಾರಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು. ಅಲ್ಲಿ 2018ರ ವರೆಗೆ ಚಿಕಿತ್ಸೆ ಪಡೆದಿದ್ದನು. ಇದರಿಂದಾಗಿ ವಿಚಾರಣೆ ವಿಳಂಬವಾಯಿತು. ಇದೀಗ ಮಾನಸಿಕವಾಗಿ ಸದಾಶಿವ ಸದೃಢನಾಗಿದ್ದು , ವಾದ ಪ್ರತಿವಾದಗಳನ್ನು ಪರಿಶೀಲಿಸಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ 30 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ದಂಡ ಪಾವತಿಸದಿದ್ದರೆ ಆರೋಪಿಯು ಇನ್ನೂ ಎರಡು ವರ್ಷಗಳ ಕಾಲ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.