ಹೊಸದಿಗಂತ ವರದಿ, ಮಂಗಳೂರು;
ಉಡುಪಿ ಜಿಲ್ಲೆಯ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ. ಬೋಟ್‌ನಲ್ಲಿದ್ದ ಮೀನುಗಾರರನ್ನು ವಶಪಡಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಗಲ್ಫ್ ರಾಷ್ಟ್ರವಾಗಿರುವ ಓಮನ್ ದೇಶದಿಂದ ಬಂದಿರುವ ಬೋಟ್‌ನಲ್ಲಿ ತಮಿಳುನಾಡು ಮೂಲದ ಮೂವರು ಮೀನುಗಾರರು ಪತ್ತೆಯಾಗಿದ್ದಾರೆ. ತಮಿಳುನಾಡಿನ ಜೇಮ್ಸ್ ಫ್ರಾಂಕ್ಲಿನ್ (50), ರಾಬಿನ್ ಸ್ಟನ್ (50) ಹಾಗೂ ಡಿರೋಸ್ ಅಲ್ಪೋನ್ಸ್ (38) ಅವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರೂ ಪ್ರಾಣಭಯದಿಂದ ಓಮನ್ ಹಾರ್ಬಾರ್‌ನಿಂದ ತಪ್ಪಿಸಿಕೊಂಡು ಭಾರತೀಯ ಮೀನುಗಾರಿಕಾ ವ್ಯಾಪ್ತಿಗೆ ಬಂದಿದ್ದಾರೆ. ಸಮುದ್ರ ಮಾರ್ಗದಲ್ಲಿ 4,000 ಕಿಲೋ ಮೀಟರ್ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಆಗಮಿಸಿದ್ದಾರೆ. ಆದರೆ, ಈ ವೇಳೆ ಡೀಸೆಲ್ ಖಾಲಿಯಾಗಿ, ಹಣ ಆಹಾರವಿಲ್ಲದೆ ಮೀನುಗಾರರು ಪರದಾಡುತ್ತಿದ್ದರು. ಆಗ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ವಿದೇಶಿ ಬೋಟ್ ಪತ್ತೆ ಹಚ್ಚಿದ ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.
ಕೋಸ್ಟ್ ಗಾರ್ಡ್ ಶಿಪ್ ಸದ್ಯ ವಿದೇಶಿ ಹಡಗು ಹಾಗೂ ಮೀನುಗಾರರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪಾಸ್ ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನಲೆ ಪ್ರಕರಣ ದಾಖಲಿಸಲಾಗಿದೆ. ಮೀನುಗಾರರು ಜೀವ ಭಯದಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.