ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಒಮಿಕ್ರಾನ್ ಸೋಂಕಿನಿಂದ 2022ರ ಫೆಬ್ರವರಿಯಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಲಿದೆ. ಆದರೆ ಈ ಅಲೆ ಎರಡನೇ ಅಲೆಗಿಂತಲೂ ಕಡಿಮೆ ತೀವ್ರತೆ ಹೊಂದಿರಲಿದೆ ಎಂದು ಕೋವಿಡ್ ನ ರಾಷ್ಟ್ರೀಯ ಸೂಪರ್ ಮಾಡಲ್ ಸಮಿತಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ವಿದ್ಯಾ ಸಾಗರ್, ಒಮಿಕ್ರಾನ್ ನಿಂದ ಭಾರತದಲ್ಲಿ ಮೂರನೇ ಅಲೆ ಬರಲಿದೆ. ಆದರೆ ನಮ್ಮಲ್ಲಿ ಹೆಚ್ಚಿನ ರೋಗನಿರೋಧಕತೆ ಇರುವುದರಿಂದ ಇದರ ತೀವ್ರತೆ ಕಡಿಮೆ ಇರಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಮೂರನೇ ಅಲೆ ಬಂದರೂ ಕೂಡ 2 ಲಕ್ಷ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಮೂರನೇ ಅಲೆಯ ಭೀತಿಯಲ್ಲಿರುವ ಕಾರಣ ಎಲ್ಲರೂ ಎರಡೂ ಡೋಸ್ ಲಸಿಕೆ ಪಡೆಯಬೇಕೆಂದು ಸಮಿತಿ ಮನವಿ ಮಾಡಿದೆ.
ಈ ಅಂಕಿ ಅಂಶಗಳು ಮುನ್ಸೂಚನೆಯಂತಲ್ಲ. ಸೋಂಕು ಯಾವ ರೀತಿ ಹರಡುತ್ತದೆ ಎಂಬ ಮಾಹಿತಿ ಮೇರೆಗೆ ಮುನ್ಸೂಚನೆ ನೀಡಬಹುದು. ಜನರಲ್ಲಿ ರೋಗನಿರೋಧಕತೆ ಕಡಿಮೆಯಾದರೆ 1.7-1.8 ಲಕ್ಷ ಕೋವಿಡ್ ಸೋಂಕಿತ ವರದಿಯನ್ನು ಕಾಣಬಹುದಾಗಿದೆ ಎಂದರು.
ಕೋವಿಡ್ ಸೋಂಕು ಕಡಿಮೆಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದ್ದು, ವರ್ಷಾಚರಣೆಯ ವೇಳೆ ಹೆಚ್ಚು ಜನ ಸೇರದೆ ಕೋವಿಡ್ ಮಾರ್ಗಸೂಚಿ ಪಾಲಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ.