Sunday, August 14, 2022

Latest Posts

ಮಾ.21ರಂದು ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವ ಸಂಚು ವಿರೋಧಿಸಿ ಪಾದಯಾತ್ರೆ

ಹೊಸದಿಗಂತ ವರದಿ,ಮಂಗಳೂರು:

ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವ ಕಾರ್ಯ ಆಗಾಗ ವ್ಯವಸ್ಥಿತವಾಗಿ ನಡೆಯುತ್ತಿದೆ. ದೂರು ಕೊಟ್ಟರೂ ಆರೋಪಿಗಳನ್ನು ಪತ್ತೆ ಮಾಡುವ ಮತ್ತು ಕಾನೂನು ಕ್ರಮ ಜರಗಿಸುವ ಕಾರ್ಯ ನಡೆಯುತ್ತಿಲ್ಲ. ಇದನ್ನೆಲ್ಲಾ ಗಮನದಲ್ಲಿ ಇರಿಸಿಕೊಂಡು ವಿಶ್ವ ಹಿಂದು ಪರಿಷತ್ತು ಮಾ.21ರ ಭಾನುವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.
ಅವರು ನಗರದ ವಿಶ್ವ ಹಿಂದು ಪರಿಷತ್ತು ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೂರ್ವಾಹ್ನ 11 ಗಂಟೆಗೆ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಮಾರ್ಗದರ್ಶನ ಮಾಡುವರು. ವಿಭಾಗ ವಿಶ್ವ ಹಿಂದು ಪರಿಷತ್ತು ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ವಿವಿಧ ಕ್ಷೇತ್ರಗಳ ಪ್ರಮುಖರು ಮತ್ತು ಧಾರ್ಮಿಕ ಮುಂದಾಳುಗಳು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.
ಕಂಕನಾಡಿ ಗರೋಡಿ, ಅತ್ತಾವರ ಬಾಬುಗುಡ್ಡೆ ದೈವಸ್ಥಾನ, ಪಂಪುವೆಲ್‌ನ ಕಲ್ಲುರ್ಟಿ ಕಲ್ಕುಡ ದೈವಸ್ಥಾನ, ಉಜ್ಜೋಡಿ ಮಹಾಕಾಳಿ ದೈವಸ್ಥಾನ, ಬೊಕ್ಕಪಟ್ಣದ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಅಯ್ಯಪ್ಪ ದೈವಸ್ಥಾನ, ದಡ್ಡಲಕಾಡ್ ಬಬ್ಬುಸ್ವಾಮಿ ದೈವಸ್ಥಾನ, ಸೂಟರ್‌ಪೇಟೆಯ ಬಬ್ಬುಸ್ವಾಮಿ ದೈವಸ್ಥಾನ, ಕದ್ರಿ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಕುದ್ರೋಳಿಯ ಶ್ರೀರಾಮ ಭಜನಾ ಮಂದಿರ, ಕೊಣಾಜೆಯ ಗೋಪಾಲಕೃಷ್ಣ ಮಂದಿರ ಮೊದಲಾದ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಶರಣ್ ವಿವರಿಸಿದರು.
ಹಿಂದು ಕ್ಷೇತ್ರಗಳಲ್ಲಿ ಧರ್ಮ ವಿರೋಧಿ ಬರಹಗಳನ್ನು ಬರೆದಿರುವುದನ್ನು, ಅಸಹ್ಯ ಹುಟ್ಟಿಸುವ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವ ಕೃತ್ಯಗಳನ್ನು ನಡೆಸಿರುವುದನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮ ಈ ತನಕ ಆಗಿಲ್ಲ ಎಂದವರು ದೂರಿದರು.
ಕ್ಷೇತ್ರಗಳ ರಕ್ಷಣೆಗೆ ಸಮಿತಿ
ಮಾ.9ರಂದು ವಿಶ್ವ ಹಿಂದು ಪರಿಷತ್ತು ಕಾರ್ಯಾಲಯದಲ್ಲಿ ಮಂಗಳೂರು ಮಹಾ ನಗರದ ಎಲ್ಲಾ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳ ಪ್ರಮುಖರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹಿಂದು ಧಾರ್ಮಿಕ ಕ್ಷೇತ್ರ ಸಂರಕ್ಷಣಾ ಸಮಿತಿ ರಚಿಸಲಾಗಿದೆ. ಗೌರವಾಧ್ಯಕ್ಷರಾಗಿ ರವೀಂದ್ರನಾಥ ರೈ, ಅಧ್ಯಕ್ಷರಾಗಿ ಸುಂದರ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕಿರಣ್ ಕೊಟ್ಟಾರಿ ಆಯ್ಕೆಯಾಗಿದ್ದಾರೆ. ಸಲಹೆಗಾರರಾಗಿ ಜಪ್ಪುಗುಡ್ಜೆಗುತ್ತು ಭುಜಂಗ ಶೆಟ್ಟಿ, ಉಪಾಧ್ಯಕ್ಷರಾಗಿ ರವೀಂದ್ರ ಮುನ್ನಿಪ್ಪಾಡಿ, ಸದಾಶಿವ ಶೆಟ್ಟಿ ಕಾವೂರು, ಬಾಬು ಮಾಡೂರು, ವಸಂತ ಕಿಣಿ ಉಳ್ಳಾಲ, ಜಯರಾಮ ಶೆಟ್ಟಿ ಇರಾ ಆಯ್ಕೆಗೊಂqಡಿದ್ದಾರೆ ಎಂದು ಶರಣ್ ವಿವರಿಸಿದರು.
ಸಭೆಯಲ್ಲಿ ಕ್ಷೇತ್ರಗಳಿಗೆ ಸಿಸಿ ಟಿವಿ ಹಾಕುವಂತೆ ಮತ್ತು ಹುಂಡಿಯನ್ನು ಆಗಾಗ ತೆರೆಯುವಂತೆ ತಿಳಿಸಲಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಆರ್ಥಿಕ ಅಡಚಣೆ ಇದೆ. ಅಂತಹ ಕ್ಷೇತ್ರಗಳಿಗೆ ಸಿಸಿಟಿವಿ ಅಳವಡಿಸಲು ಧಾರ್ಮಿಕ ದತ್ತಿ ಸಚಿವರ ಮೂಲ ಸಹಾಯ ಧನ ಒದಗಿಸಿಕೊಡುವಂತೆ ವಿನಂತಿಸಲು ನಿರ್ಧರಿಸಲಾಗಿದೆ ಎಂದು ಶರಣ್ ಪಂಪುವೆಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ತು ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರು, ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗ ದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮತ್ತು ಜಿಲ್ಲಾ ಸೇವಾ ಪ್ರಮುಖ್ ಪ್ರವೀಣ್ ಕುತ್ತಾರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss