ಹೊಸ ದಿಗಂತ ವರದಿ, ವಿಜಯಪುರ:
ಉಪ ಚುನಾವಣೆ ಅಬ್ಬರದ ಪ್ರಚಾರಕ್ಕೆ ಇಂದು ಕೊನೆ ದಿನವಾದ ಹಿನ್ನೆಲೆ, ಭೀಮಾತೀರದ ಸಿಂದಗಿ ಪಟ್ಟಣದಲ್ಲಿ ಬುಧವಾರ ಬಿಜೆಪಿ ನಾಯಕರ ದಂಡು, ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತ ಬೇಟೆಗೆ ಮುಂದಾಯಿತು.
ಇಲ್ಲಿನ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ದೇಶ, ಪಕ್ಷ ಹಾಗೂ ಬಿಜೆಪಿ ಮುಖಂಡರ ಜೈಯಘೋಷ ಮುಗಿಲು ಮುಟ್ಟಿತ್ತು.
ಅಲ್ಲದೆ ಡೊಳ್ಳು ಕುಣಿತ, ಲಂಬಾಣಿ ಕುಣಿತ ಸೇರಿದಂತೆ ಸಕಲ ವಾದ್ಯ ವೃಂದ ಮೆರವಣಿಗೆಯುದ್ದಕ್ಕೂ ಕಂಡುಬಂತು.
ಬೃಹತ್ ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿ ರಮೇಶ ಭೂಸನೂರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ, ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಚಲನಚಿತ್ರ ನಟಿ ಶ್ರುತಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್. ಪಾಟೀಲ ನಡಹಳ್ಳಿ, ಪಿ. ರಾಜೀವ, ನಿಗಮ ಮಂಡಳ ಅಧ್ಯಕ್ಷ ವಿಜುಗೌಡ ಪಾಟೀಲ, ಎಸ್.ಕೆ. ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸೇರಿದಂತೆ ಹಲವು ಮುಖಂಡರು ಇದ್ದರು.
ಮೆರವಣಿಗೆಯಲ್ಲಿ ಸಿಂದಗಿ ತಾಲೂಕಿನ ಗ್ರಾಮೀಣ ಭಾಗ ಹಾಗೂ ಪಟ್ಟಣ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರ ಕಂಡು ಬಂತು. ಅಬ್ಬರದ ಪ್ರಚಾರ ನಡೆಸುವ ಮೂಲಕ ಬಿಜೆಪಿ ನಾಯಕರು, ಉಪ ಚುನಾವಣೆ ಪ್ರಚಾರದಬ್ಬರಕ್ಕೆ ತೆರೆಯೆಳೆದರು.