Wednesday, June 29, 2022

Latest Posts

ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ಉಡುಪಿ ನಗರಸಭೆ ಅಧಿಕಾರಿಗಳಿಂದ ದಂಡ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………


ಹೊಸ ದಿಗಂತ ವರದಿ, ಉಡುಪಿ:

ರಾಜ್ಯ ಸರಕಾರದ ಆದೇಶದ ನಡುವೆಯೂ ಭಾನುವಾರ ನಗರದ ಹೊರ ಭಾಗದ ಸಂತೆಕಟ್ಟೆ ಸಂತೆ ಮಾರುಕಟ್ಟೆಯ ಹೊರಗಡೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ಉಡುಪಿ ನಗರಸಭೆ ಅಧಿಕಾರಿಗಳು ದಂಡ ವಿಧಿಸುವ ಮೂಲಕ ತೆರವುಗೊಳಿಸಿದ್ದಾರೆ.
ಶನಿವಾರ ಹೊರಡಿಸಲಾದ ಪರಿಷ್ಕೃತ ಆದೇಶದಲ್ಲಿ ವಾರದ ಸಂತೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಉಡುಪಿ ನಗರಸಭೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಈ ಹಿಂದೆಯೇ ಸಂತೆಕಟ್ಟೆ ವಾರದ ಸಂತೆಯನ್ನು ಬಂದ್ ಮಾಡಿತ್ತು. ಆದರೂ ಕಳೆದ ವಾರದಂತೆ ಇಂದು ಕೂಡ ಬೆಳಗಿನ ಜಾವ 6ಗಂಟೆಯಿಂದ ತರಕಾರಿ ಸೇರಿದಂತೆ ವಿವಿಧ ವ್ಯಾಪಾರಸ್ಥರು ಮಾರುಕಟ್ಟೆಯ ಹೊರಗೆ ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ನಡೆಸುತ್ತಿದ್ದರು. ಕೆಲವರು ರಸ್ತೆ ಬದಿ ರಾಶಿ ಹಾಕಿ ವ್ಯಾಪಾರ ನಡೆಸಿದರೆ ಇನ್ನು ಕೆಲವರು ವಾಹನಗಳಲ್ಲಿಯೇ ತರಕಾರಿಗಳನ್ನು ಮಾರಾಟಕ್ಕಿಳಿದಿದ್ದರು. ಇದರಿಂದ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ  ಖರೀದಿಸಲು ನೆರೆದಿದ್ದರು.
ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ ನೇತೃತ್ವದ ತಂಡ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆ ಹಾಗೂ ವ್ಯಾಪಾರಸ್ಥರಿಗೆ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿತು. ಆದರೂ ವ್ಯಾಪಾರ ಮುಂದುವರೆಸಿದ ಸುಮಾರು 13 ಮಂದಿ ವ್ಯಾಪಾರಸ್ಥರಿಗೆ ತಲಾ 200ರೂ.ಗಳಂತೆ ಒಟ್ಟು 2600 ರೂ. ದಂಡ ವಿಧಿಸಲಾಯಿತು. ಬೆಳಗ್ಗೆ 10ಗಂಟೆ ಸುಮಾರಿಗೆ ಎಲ್ಲ ವ್ಯಾಪಾರಸ್ಥರನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ಸೆಲೂನ್‌ಗಳ ಮೇಲೂ ದಂಡ
ಭಾನುವಾರ ಉಡುಪಿ ನಗರದಲ್ಲಿ ಅನುಮತಿ ಇಲ್ಲದ ಸೆಲೂನ್‌ಗಳನ್ನು ತೆರೆದು ಗ್ರಾಹಕರಿಗೆ ಸೇವೆ ನೀಡಲಾಗುತ್ತಿತ್ತು. ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೂನ್, ಬ್ಯೂಟಿ ಪಾರ್ಲರ್‌ಗಳನ್ನು ಬಂದ್ ಮಾಡಲಾಗಿದೆ. ಆದಾಗ್ಯೂ ನಿಯಮ ಉಲ್ಲಂಘಿಸಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ಸೆಲೂನ್‌ಗಳ ಮಾಲೀಕರಿಗೆ ತಲಾ 500 ರೂ. ದಂಡ ವಿಧಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
10 ವಾಹನಗಳು ಮುಟ್ಟುಗೋಲು
ಮಧ್ಯಾಹ್ನ 12ಗಂಟೆಯ ನಂತರವೂ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ 10 ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೇ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ 37 ದ್ವಿಚಕ್ರವಾಹನ ಸವಾರರು ಮತ್ತು ಮೂವರು ನಾಲ್ಕು ಚಕ್ರದ ವಾಹನ ಚಾಲಕರಿಗೆ ದಂಡ ವಿಧಿಸಲಾಗಿದೆ ಎಂದು ಎಸ್ಪಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss