ಹೊಸ ದಿಗಂತ ವರದಿ, ಮೈಸೂರು:
ನಗರದ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕರೆ, ಇತ್ತ ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಜ್ರ, ರತ್ನ ಖಚಿತ ಸಿಂಹಾಸನದಲ್ಲಿ ಕುಳಿತ ಖಾಸಗಿ ದರ್ಬಾರ್ನ್ನು ಪ್ರಾರಂಭಿಸಿದರು. ಅ.14ರ ತನಕ ಖಾಸಗಿ ದರ್ಬಾರ್ನ್ನು ನಡೆಸಲಿದ್ದಾರೆ. ದಸರಾದ ನವರಾತ್ರಿಯ ಮೊದಲ ದಿನವಾದ ಗುರುವಾರ ಮುಂಜಾನೆ 4.30 ರಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಜರುಗಿದವು. ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತç ಮಾಡಿಸಲಾಯಿತು. ನಂತರ ಬೆಳಗ್ಗೆ 6 ರಿಂದ 6.11 ರವರೆಗಿನ ಕನ್ಯಾ ಲಗ್ನದಲ್ಲಿ ದರ್ಬಾರ್ ಹಾಲ್ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಿಸಲಾಯಿತು. ಬಳಿಕ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬೆ. 7.45 ರಿಂದ 8.55 ರ ತುಲಾ ಲಗ್ನದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರು ಕಂಕಣಧಾರಣೆ ಮಾಡಿದರೆ, ವಾಣಿವಿಲಾಸ ದೇವರ ಮನೆಯಲ್ಲಿ ಯದುವೀರ್ ಪತ್ನಿ ತ್ರಿಶಿಕ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಿದರು.
ಅರಮನೆಯ ಪಟ್ಟದ ಹಸು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆಯನ್ನು ಅರಮನೆಯ ಪೂರ್ವ ದಿಕ್ಕಿನಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಬಳಿ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ಬಳಿಕ ಪುನಃ ಜಯಮಾರ್ತಾಂಡ ದ್ವಾರದ ಮೂಲಕ, ಮಂಗಳವಾದ್ಯಗಳೊAದಿಗೆ ಅರಮನೆಯ ಕಲ್ಯಾಣ ತೊಟ್ಟಿಗೆ ಕರೆದುಕೊಂಡು ಬಂದು ಪೂಜೆ ಸಲ್ಲಿಸಲಾಯಿತು.
ಆ ನಂತರ ಬೆಳಗ್ಗೆ 11.45 ರಿಂದ ಮ. 12.15 ರ ನಡುವಿನ ಧನುರ್ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸಿದರು. ನಂತರ ಅರಮನೆಯ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ಬಿಜಯ ಆಚರಣೆಯಲ್ಲಿ ಪಾಲ್ಗೊಂಡರು.
ಅರಮನೆಯಲ್ಲಿ ನಡೆಯುವ ಶರವನ್ನಾತ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಅರಮನೆಯ ಕುಟುಂಬಸ್ಥರು, ಮಾಧ್ಯಮದವರಿಗೆ ಕೋವಿಡ್ 3ನೇ ಅಲೆಯ ಭೀತಿಯ ಕಾರಣದಿಂದಾಗಿ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರಿಗೂ ಅರಮನೆಯ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಧ್ವನಿ ಬೆಳಕು ಕಾರ್ಯಕ್ರಮವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.