ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭದ ಕುರಿತು I.N.D.I.A. ಬಣದ ನಾಯಕರ ಇಬ್ಬಗೆ ನೀತಿ ಮತ್ತೊಮ್ಮೆ ಬಯಲಾಗಿದೆ.
ಒಂದೆಡೆ I.N.D.I.A. ಬಣದ ನಾಯಕರು ಮಹಾಕುಂಭವನ್ನು ಟೀಕಿಸುತ್ತಿದ್ದರೆ, ಮತ್ತೊಂದೆಡೆ ಆದರ ನಾಯಕರು ಒಬ್ಬರಾಗಿ ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಲು ಮುಂದಾಗಿದ್ದಾರೆ.
ಆದರೆ ಇಲ್ಲೊಬ್ಬ I.N.D.I.A. ಬಣದ ಪ್ರಮುಖ ನಾಯಕ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿನಕ್ಕೊಂದು ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ್ ಯಾದವ್ ಅವರು ‘ಮಹಾ ಕುಂಭ ಎಂಬುದೇ ಇಲ್ಲ’ ಮತ್ತು ಹಣವನ್ನು ‘ವ್ಯರ್ಥ’ ಮಾಡಲು ಹಾಗೂ ಜನರನ್ನು ತಪ್ಪುದಾರಿಗೆಳೆಯಲು ಈ ಹೆಸರನ್ನು ಹುಟ್ಟುಹಾಕಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯ ಇದು ವಿವಾದ ಕೇಂದ್ರ ಬಿಂದುವಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಕಳೆದ ತಿಂಗಳು ಪವಿತ್ರ ನಗರದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದ ಅಖಿಲೇಶ್ ಅವರು, ಕೆಲ ದಿನಗಳ ಹಿಂದೆ ಮಹಾಕುಂಭವನ್ನು ಮತ್ತೊಂದು ತಿಂಗಳ ಕಾಲ ವಿಸ್ತರಿಸ ಬೇಕೆಂದು ಬೇಡಿಕೆ ಇಟ್ಟಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ. ಇದೀಗ ಮಹಾ ಕುಂಭ ಎಂಬುದೇ ಇಲ್ಲ ಎನ್ನುವ ಮೂಲಕ ಭಾರಿ ವಿವಾದ ಸೃಷ್ಠಿಸಿದ್ದಾರೆ.
ಇತ್ತೀಚೆಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಮಹಾ ಕುಂಭವನ್ನು “ಅರ್ಥಹೀನ” ಎಂದು ಕರೆದಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಸಹ ಇದರ ಕುರಿತು ವಿವಾದಿತ ಹೇಳಿಕೆ ನೀಡಿದ್ದರು.
ಅಖಿಲೇಶ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಯಾದವ್ ಅವರು “ಆಕ್ಷೇಪಾರ್ಹ ಹೇಳಿಕೆಗಳನ್ನು” ನೀಡುವುದರ ಜೊತೆಗೆ “ಸುಳ್ಳು ಆರೋಪಗಳನ್ನು” ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಸನಾತನ ಧರ್ಮವನ್ನು ವಿರೋಧಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಾಡುತ್ತಿರುವ ಕೀಳು ರಾಜಕೀಯ ಅತ್ಯಂತ ಆಕ್ಷೇಪಾರ್ಹ. ಒಂದೆಡೆ, ಅವರು ಮಹಾಕುಂಭದಂತಹ ಮಹಾ ಉತ್ಸವದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ, ಅವರು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಹೊರಿಸುವಲ್ಲಿ ನಿರತರಾಗಿದ್ದಾರೆ. ಅಖಿಲೇಶ್ ಯಾದವ್ ತಮ್ಮ ಅಸಂವೇದನಾಶೀಲ ಹೇಳಿಕೆಗಳಿಗಾಗಿ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.