ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೀಘ್ರದಲ್ಲೇ ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಜಾರಿಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಪರಿಕಲ್ಪನೆಯನ್ನು ‘ಅಸಾಧ್ಯ’ ಎಂದು ತಳ್ಳಿಹಾಕಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆಗಾಗಿ ಪ್ರಧಾನಿಯವರು ಸಂಸತ್ತಿನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದು ‘ಅಸಾಧ್ಯ’ ಎಂದು ಪ್ರತಿಪಾದಿಸಿದರು. ಪ್ರಧಾನಿ ಮೋದಿ ಏನು ಹೇಳಿದ್ದಾರೋ ಅದನ್ನು ಮಾಡುವುದಿಲ್ಲ. ಏಕೆಂದರೆ ಸಂಸತ್ತಿನಲ್ಲಿ ಏಕಕಾಲಿಕ ಚುನಾವಣೆ ವಿಚಾರ ಬಂದಾಗ, ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಆಗ ಮಾತ್ರ ಇದು ಸಂಭವಿಸುತ್ತದೆ. ಇದು ಅಸಾಧ್ಯ. ಒಂದು ರಾಷ್ಟ್ರ, ಒಂದು ಚುನಾವಣೆ ಅಸಾಧ್ಯ,ಎಂದು ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.