ಬರೋಬ್ಬರಿ 3,000 ಕೋಟಿ ವಂಚಿಸಿದ ಚೀನೀ ಖದೀಮರ ಜಾಲ ಭೇದಿಸಿದ ಸೈಬರ್ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾದೊಂದಿಗೆ ಲಿಂಕ್‌ ಇರಿಸಿಕೊಂಡಿದ್ದ ಬರೋಬ್ಬರಿ 3,000 ಕೋಟಿ ರೂಪಾಯಿ ಮೌಲ್ಯದ ಆನ್‌ಲೈನ್ ವಂಚನೆ ಜಾಲವನ್ನು ಭೇದಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರ ಸೈಬರ್ ಸೆಲ್ ವಿಭಾಗವು ಹೇಳಿಕೊಂಡಿದೆ. ಪ್ರಮುಖ ಸಂಸ್ಥೆಗಳಲ್ಲಿ ಅರೆಕಾಲಿಕ ಕೆಲಸ ಕೊಡಿಸುವ ಆಮಿಷವೊಡ್ಡಿ ಹಾಗೂ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸುವ ನೆಪದಲ್ಲಿ ಈ ಜಾಲ ಜನರನ್ನು ವಂಚಿಸುತ್ತಿತ್ತು ಎಂದು ಯುಪಿ ಸೈಬರ್ ಸೆಲ್ ನ ಪೊಲೀಸ್ ಅಧೀಕ್ಷಕ ತ್ರಿವೇಣಿ ಸಿಂಗ್ ಹೇಳಿದ್ದಾರೆ.
ಈ ತಂಡದ ಭಾಗವಾಗಿದ್ದ ಪ್ರಮುಖ ಆರೋಪಿಯನ್ನು ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ನೋಯ್ಡಾದಲ್ಲಿ ಸೆರೆಹಿಡಿದಿದ್ದಾರೆ. ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ 35 ವರ್ಷದ ಮಂಜರುಲ್ ಇಸ್ಲಾಂ ಎಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹಗರಣದಲ್ಲಿ ಬಲಿಪಶುವಾದವರ ಖಾತೆಯಿಂದ ವಂಚಿಸಿದ ಹಣವನ್ನು ಯುಪಿಐ ಐಡಿಗಳ ಮೂಲಕ ಚೀನಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂನಲ್ಲಿ ನಿರ್ವಹಣೆಯಾಗುತ್ತಿದ್ದ ಕ್ರಿಪ್ಟೋ ಕರೆನ್ಸಿ ವ್ಯಾಲೆಟ್‌ಗಳಿಗೆ ವರ್ಗಾಯಿಸಲಾಗುತ್ತಿತ್ತು.
ಅರೆಕಾಲಿಕ ಉದ್ಯೋಗಕ್ಕಾಗಿ ಆಕರ್ಷಕ ಜಾಹೀರಾತುಗಳು, ಹೂಡಿಕೆ ಹಣವನ್ನು ದ್ವಿಗುಣಗೊಳಿಸುವುದಾಗಿ ಈ ಗ್ಯಾಂಗ್ ಜನರಿಗೆ ಸಂದೇಶಗಳನ್ನು ಕಳುಹಿಸುತ್ತಿತ್ತು. ಈ ಸಂದೇಶಗಳನ್ನು ನಂಬಿ ವ್ಯವಹರಿಸುತ್ತಿದ್ದ ಜನರು ಈ ಜಾಲದ ಬಲೆಯಲ್ಲಿ ಸಿಲುಕಿಕೊಳ್ಳುತ್ತಿದ್ದರು.
ಈ ಬೃಹತ್ ಸಂದೇಶ ಜಾಲವನ್ನು ಚೀನಾದೇಶದಲ್ಲಿನ ಸರ್ವರ್‌ಗಳಿಂದ ರಚಿಸಲಾಗಿದೆ ಎಂದು ಸಿಂಗ್ ತಿಳಿಸಿದರು. ಮೋಸಗಾರರಿಂದ ವಂಚಿಸಿದ ಹಣವನ್ನು ಚೀನಾಕ್ಕೆ ರವಾನೆಯಾಗಿದೆ ಎಂಬುದನ್ನು ಸೈಬರ್ ಸೆಲ್ ತಂಡ ಪತ್ತೆ ಮಾಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!