ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನರಾಯಪಟ್ಟಣದಲ್ಲಿ ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದು ತನ್ನ ಆಸ್ತಿಯನ್ನು ಮಾರಿ ಸಾಲ ಮಾಡಿ ಅದನ್ನು ತೀರಿಸಲು ಸಾಧ್ಯವಾಗದೆ ಇಡೀ ಕುಂಟುಂಬವೆ ಆತ್ಮಹತ್ಯೆಗೆ ಶರಣಾಗಿದೆ.
ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದ ಶ್ರೀನಿವಾಸ್ (43) ಅವರ ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀನಿವಾಸ್ ಕಳೆದ ಶನಿವಾರ ಪತ್ನಿ ಹಾಗೂ ಮಗಳೊಂದಿಗೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಸಂಪರ್ಕಕ್ಕೆ ಸಿಗದೇ ಇದ್ದಾಗ ಅನುಮಾನಗೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರು ನಿನ್ನೆ (ಆ.14) ರಾತ್ರಿ ನುಗ್ಗೆಹಳ್ಳೀ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ಲಾಪುರ ಹೇಮಾವತಿ ನಾಲೆಯಲ್ಲಿ ಪತಿ-ಪತ್ನಿಯ ಶವಗಳನ್ನು ಹೊರತೆಗೆದಿದ್ದು, ಇಂದು ಮಗಳ ಮೃತದೇಹವೂ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ವಾಸವಿದ್ದ, ಚಾಲಕನಾಗಿ ಉತ್ತಮ ಜೀವನ ನಡೆಸುತ್ತಿದ್ದ ಹಾಗೂ ಸ್ವಂತ ಎರಡು ಕಾರುಗಳನ್ನು ಹೊಂದಿದ್ದ ಶ್ರೀನಿವಾಸ್ ಗೆ ಅವರ ಪತ್ನಿ ಬೆಂಬಲ ನೀಡಿದ್ದರು. ಚನ್ನರಾಯಪಟ್ಟಣದಲ್ಲಿ ಸ್ವಂತ ಮನೆಯೂ ಇತ್ತು.
ಆದರೆ, ಮೊಬೈಲ್‌ನಲ್ಲಿ ಜಾಹೀರಾತು ನೋಡಿ ಆನ್‌ಲೈನ್‌ನಲ್ಲಿ ರಮ್ಮಿ ಆಡುವ ಗೀಳನ್ನು ಹೊಂದಿದ್ದ ಶ್ರೀನಿವಾಸ್, ಕಾರು, ಮನೆ ಮಾರಿ ಬೀದಿಯಲ್ಲಿ ಜೀವನ ನಡೆಸಲು ಆರಂಭಿಸಿದ್ದು, ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿ ಆಟವಾಡಲು ಆರಂಭಿಸಿದ್ದಾರೆ. ಕೆಲಸಬಿಟ್ಟು ಆನ್ಲೈನ್ ಗೇಮ್ಗೆ ಸೀಮಿತವಾಗಿ ಸಾಲ ಹೆಚ್ಚಾದಾಗ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ.