ಆನ್ಲೈನ್‌ ವಂಚಕನ ಮಾತಿಗೆ ಮರುಳಾದ ಯುವಕನಿಗೆ 43 ಸಾವಿರ ಪಂಗನಾಮ!

ಮಡಿಕೇರಿ: ಆನ್’ಲೈನ್ ವಂಚನೆ ಜಾಲದ ಲಿಂಕ್ ಒತ್ತಿ ಯುವಕನೊಬ್ಬ 43 ಸಾವಿರ ರೂ. ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.
ಸುಂಟಿಕೊಪ್ಪ 2ನೇ ವಿಭಾಗದ ಸಮೀರ್ ( ಕಿಣ್ಣುಸ್) ಎಂಬವರು ಹಣ ಕಳೆದುಕೊಂಡವರಾಗಿದ್ದಾರೆ.
ಝೆಡ್ ಮನಿ ಎಂಬ ಆಪ್’ನಿಂದ 38 ಸಾವಿರ ಮೌಲ್ಯದ ಮೊಬೈಲ್’ನ್ನು ಇಎಂಐ ಮೂಲಕ ಸಾಲವಾಗಿ ಖರೀದಿಸಿದ್ದ ಸಮೀರ್ ತಿಂಗಳ ಕಂತನ್ನು ನಿಯಮಿತವಾಗಿ ಪಾವತಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಏ.4 ರಂದು ಈ ತಿಂಗಳ ಕೊನೆಯ ಕಂತು ಕೂಡಾ ಇವರ ಖಾತೆಯಿಂದ ಪಾವತಿಯಾಗಿದೆ. ಆದರೆ ಏ.7 ರಂದು ಪುನಃ ಖಾತೆಯಿಂದ ಹಣ ಜಮೆಯಾಗಿದೆ.
ಇದರಿಂದ ವಿಚಲಿತರಾದ ಸಮೀರ್ ವಿಚಾರಿಸಲೆಂದು ಝೆಡ್ ಮನಿ ಕಂಪನಿಯ ಕಸ್ಟಮರ್ ಕೇರ್’ಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಆ ನಂಬರ್ ದೀರ್ಘ ಕಾಲ ಬಿಝಿ ಆಗಿಯೇ ಇದ್ದುದರಿಂದ ಕಾಲ್ ರಿಸೀವ್ ಆಗಲಿಲ್ಲ. ಹೀಗಾಗಿ ಸಮೀರ್ ಗೂಗಲ್ ‘ನಲ್ಲಿ ಸರ್ಚ್ ಮಾಡಿದಾಗ ಝೆಡ್ ಲೋನ್ ಕಂಪನಿಯ ವೆಬ್ (ಫೇಕ್) ಸೈಟ್ ಕಣ್ಣಿಗೆ ಬಿದ್ದಿದೆ.
ಅದರಲ್ಲಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಅತ್ತಲಿನವರು ಕರೆ ಸ್ವೀಕರಿಸಿರಲಿಲ್ಲ. ಇದಾದ ಸ್ವಲ್ಪ ಹೊತ್ತಿನ ನಂತರ ಬೇರೊಂದು ನಂಬರ್’ನಿಂದ (8178802675) ಸಮೀರ್’ಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ತಾನು ಝೆಡ್ ಲೋನ್ ಕಂಪನಿಯ ಕಸ್ಟಮರ್ ಕೇರ್’ನವನೆಂದು ಹೇಳಿಕೊಂಡಿದ್ದಾನೆ. ಅವನ ಮಾತನ್ನು ನಂಬಿದ ಸಮೀರ್ ಲೋನ್ ಕಂಪನಿ ತಿಂಗಳಲ್ಲಿ ಎರಡು ಸಲ ಇಎಂಐ ಪಾವತಿಸಿಕೊಂಡಿರುವುದನ್ನು ವಿವರಿಸಿದ್ದಾರೆ. ಅತ್ತಲಿಂದ ಕರೆ ಮಾಡಿದಾತ ‘ನಿಮಗೆ ಇನ್ನೊಂದು ನಂಬರ್’ನಿಂದ ಕಾಲ್ ಬರುತ್ತದೆ. ಅವರು ನಿಮ್ಮ ಪ್ರಾಬ್ಲಮ್ ಸಾಲ್ವ್ ಮಾಡುತ್ತಾರೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ.
ನಂತರ ಮತ್ತೊಂದು ನಂಬರ್ (9330964042) ನಿಂದ ಕರೆ ಮಾಡಿದಾತ ಮೊಬೈಲ್’ನಲ್ಲಿ ‘Any Desk ಆಪ್ ಇನ್ಸ್ಟಾಲ್ ಮಾಡಲು ಸಮೀರ್ ಗೆ ತಿಳಿಸಿದ್ದಾನೆ. ಆದರೆ ಆ ಆಪ್ ಇನ್ಸ್ಟಾಲ್ ಆಗುತ್ತಿಲ್ಲ ಎಂದು ಸಮೀರ್ ಹೇಳಿದ್ದಾರೆ. ಹೀಗಾಗಿ ಕರೆ ಮಾಡಿದಾತ ಲಿಂಕ್’ವೊಂದನ್ನು ಕಳುಹಿಸುತ್ತೇನೆ. ಅದನ್ನು ಒತ್ತುವಂತೆ ಮತ್ತು ಲಿಂಕ್ ತೆರೆದ ಆದ ನಂತರ ಅದರಲ್ಲಿ ಲೋನ್ ಆಪ್ ಹಾಗೂ ಪ್ರೊಫೈಲ್ ಓಪನ್ ಮಾಡಲು ಹೇಳಿದ್ದು, ಅದರಂತೆ ಆತ ಕಳುಹಿಸಿದ ಲಿಂಕ್’ನ್ನು ಸಮೀರ್ ಒತ್ತಿದ್ದಾರೆ.
ಖದೀಮ ಹೇಳಿದಂತೆ ಆ ಲಿಂಕ್’ನಲ್ಲಿ ಲೋನ್ ಆಪ್ ಮತ್ತು ಪ್ರೊಫೈಲ್ ಓಪನ್ ಮಾಡಿದ್ದಾರೆ. ಈ ಸಂದರ್ಭ ಸಮೀರ್ ಅವರ ಮೊಬೈಲ್’ನ್ನು ಕಂಪ್ಲೀಟ್ ಆಗಿ ಅತ್ತ ಕಡೆಯಿಂದ ಕಾಲ್ ಮಾಡಿದ್ದ ಖದೀಮ ಹ್ಯಾಕ್ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆಯೇ ಸಮೀರ್ ಅವರ ಖಾತೆಯಿಂದ ಮೊದಲಿಗೆ 13 ಸಾವಿರ ಮಾಯವಾಗಿದೆ. ನಂತರ ಒಮ್ಮೆಲೇ 30 ಸಾವಿರ ನಾಪತ್ತೆಯಾಗಿದೆ.
ಖಾತೆಯಲ್ಲಿದ್ದ ಹಣವೆಲ್ಲಾ ಹ್ಯಾಕರ್’ನ ಪಾಲಾಗುತ್ತಿದ್ದಂತೆಯೇ ಅತ್ತ ಕಡೆಯಿಂದ ಬಂದಿದ್ದ ಕಾಲ್ ಕೂಡಾ ಸ್ಥಗಿತ ಆಗಿದೆ.
ತಾನು ಮೋಸ ಹೋಗಿರುವುದನ್ನು ಅರಿತ ಸಮೀರ್ ರ ಬ್ಯಾಂಕ್’ಗೆ ತೆರಳಿ ವಿಷಯ ತಿಳಿಸಿದ್ದು, ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿದ್ದಾರೆ.
ಇತ್ತ ನಕಲಿ ಲಿಂಕ್’ನಿಂದಾಗಿ ಹಣ ಕಳೆದುಕೊಂಡಿರುವ ಸಮೀರ್ ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ತನ್ನಂತೆ ಬೇರೆಯವರು ಮೋಸ ಹೋಗದಂತೆ ಎಚ್ಚರವಹಿಸುಂತೆ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!