ಹೊಸದಿಗಂತ ಆನ್ ಲೈನ್ ಡೆಸ್ಕ್:
ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಯಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರವು ಈವರೆಗೆ ಯಾವುದೇ ರಾಜ್ಯದಿಂದ ಒಂದು ಪ್ರಾತಿನಿಧ್ಯ ಸ್ವೀಕರಿಸಿಲ್ಲ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರು, ಜಿಎಸ್ಟಿ ಕೌನ್ಸಿಲ್ ಸಭೆಯ ಕಾರ್ಯಸೂಚಿಯನ್ನು ವಿವಿಧ ರಾಜ್ಯಗಳು ನೀಡಿದ ಸಲಹೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ಈ ವಿಷಯವನ್ನು (ಜಿಎಸ್ಟಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸೇರ್ಪಡೆ) ಕಾರ್ಯಸೂಚಿಯಲ್ಲಿ ಸೇರಿಸಲು ಒಂದೇ ಒಂದು ರಾಜ್ಯವು ನಮಗೆ ಸೂಚಿಸಿಲ್ಲ ಎಂದರು.
ಇನ್ನು ಜಿಎಸ್ಟಿ ಮುಂದಿನ ಮಂಡಳಿ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಭಾಗವಹಿಸುವಾಗ ಮತ್ತೆ ಈ ವಿಷಯವನ್ನು ತೆಗೆದುಕೊಳ್ಳಲು ಕೇಂದ್ರವು ಮುಕ್ತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲಿಯಂ ಮತ್ತು ಡೀಸೆಲ್ ಅನ್ನು ಜಿಎಸ್ಟಿ ಚೌಕಟ್ಟಿನಡಿಯಲ್ಲಿ ಸೇರಿಸುವುದು ಬಹಳ ಸಮಯದಿಂದ ಬಾಕಿ ಉಳಿದಿದೆ. ಒಂದು ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿಯಡಿ ತಂದರೆ, ತೆರಿಗೆ ಏರಿಕೆ ಪರಿಣಾಮ ತಪ್ಪಿಸಬಹುದು. ಇದರ ಪರಿಣಾಮವಾಗಿ, ಈ ಉತ್ಪನ್ನಗಳನ್ನು ಹೆಚ್ಚು ಅಗ್ಗದ ಬೆಲೆಗೆ ಮಾರಾಟ ಮಾಡಬಹುದು ಎಂದು ತಜ್ಞರು ಮತ್ತು ವಿರೋಧ ಪಕ್ಷಗಳು ಸೂಚಿಸಿವೆ.
ಪ್ರಸ್ತುತ, ಕೇಂದ್ರವು ಅಬಕಾರಿ ಸುಂಕ, ಹೆಚ್ಚುವರಿ ಅಬಕಾರಿ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತದೆ. ಹಾಗೆಯೇ ರಾಜ್ಯಗಳು ಇವುಗಳ ಮೇಲೆ ಮೌಲ್ಯವರ್ಧಿತ ತೆರಿಗೆ ಮತ್ತು ಮಾರಾಟ ತೆರಿಗೆ ವಿಧಿಸುತ್ತವೆ.ಅಂದಾಜಿನ ಪ್ರಕಾರ, ಪೆಟ್ರೋಲ್ನ ಚಿಲ್ಲರೆ ಬೆಲೆಯು ಶೇ 60ರಷ್ಟು ಕೇಂದ್ರ ಮತ್ತು ರಾಜ್ಯ ತೆರಿಗೆಗಳಿಂದ ಕೂಡಿದೆ.