ಕಾರ್ಮಿಕನ ಬಲಿಪಡೆದ ಹುಲಿ ಸೆರೆಗೆ ಕಾರ್ಯಾಚರಣೆ; 35 ಕ್ಯಾಮೆರಾಗಳಿಂದ ಟ್ರ್ಯಾಪಿಂಗ್‌

ಹೊಸದಿಗಂತ ವರದಿ, ಮಡಿಕೇರಿ
ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಮಾನವ ಜೀವ ಬಲಿ ಪಡೆದ ಹುಲಿಯನ್ನು ಸೆರೆ ಹಿಡಿಯಲು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವೀರಾಜಪೇಟೆ ಡಿಎಫ್‍ಓ ಚಕ್ರಪಾಣಿ ಮಾಹಿತಿ ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹುಲಿಯ ಜಾಡು ಕಂಡು ಬಂದಿರುವ ಸ್ಥಳಗಳಲ್ಲಿ 35 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳಲ್ಲಿ ಹುಲಿಯ ಚಲನ ವಲನಗಳು ಪ್ರತಿ ನಿತ್ಯವೂ ದಾಖಲಾಗುತ್ತಿದೆ. ಮಾನವ ಜೀವ ಬಲಿ ಪಡೆದ ಹುಲಿ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಿಂದ ಬಂದಿದ್ದು, ಅದರ ಚಲನ ವಲನಗಳ ಬಗ್ಗೆ ನಿಗಾ ಇಡಲಾಗಿದೆ. ಕೆಲವು ಸ್ಥಳಗಳಲ್ಲಿ ಬೋನುಗಳನ್ನು ಇರಿಸಲಾಗಿದ್ದು, ಹುಲಿಯನ್ನು ಆಕರ್ಷಿಸಲು ಹಸಿ ಮಾಂಸವನ್ನು ಹಾಕಲಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಗಾಗಿ 2 ಆನೆಗಳ ಸಹಿತ ಇಬ್ಬರು ಶಾರ್ಪ್ ಶೂಟರ್’ಗಳು ಹಾಗೂ ಓರ್ವ ಅರವಳಿಕೆ ತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದ್ದು, ಕಂಡಂಗಾಲ ಶಾಲೆಯಲ್ಲಿ ಕ್ಯಾಂಪ್ ತೆರೆಯಲಾಗಿದೆ. ಹಗಲು ಮತ್ತು ರಾತ್ರಿಯಲ್ಲಿ ವಿವಿಧ ಪಾಳಿಗಳಲ್ಲಿ ಕೂಂಬಿಂಗ್ ನಡೆಸಲಾಗುತ್ತಿದ್ದು, ಒಟ್ಟು ಪ್ರತಿ ನಿತ್ಯ 5 ಕಿ.ಮೀ. ವ್ಯಾಪ್ತಿಯಲ್ಲಿ ಹುಲಿಯ ಸೆರೆಗಾಗಿ ಕೂಂಬಿಂಗ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕೊಡಗು ಸೇರಿದಂತೆ ನಾಗರಹೊಳೆಯ ಸಿಬ್ಬಂದಿಗಳನ್ನು ಕೂಡಾ ಹುಲಿ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಮತ್ತೊಂದು ಅನಾಹುತ ಘಟಿಸುವ ಮುನ್ನ ಹುಲಿಯನ್ನು ಸೆರೆ ಹಿಡಿಯಬೇಕು ಎಂಬುದು ಇಲಾಖೆಯ ಗುರಿಯಾಗಿದೆ. ಹುಲಿ ಸೆರೆಯಾದ ಬಳಿಕವೇ ಅದರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಹೇಳಿದರು.
ಗ್ರಾಮಸ್ಥರಿಗೂ ಹುಲಿಯ ಚಲನ ವಲನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹುಲಿ ಸಂಜೆ ವೇಳೆಗೆ ಕಾಡಿನಿಂದ ಹೊರಬರುತ್ತಿದ್ದು, ಈ ವೇಳೆ ತೋಟಗಳಲ್ಲಿ ಕೆಲಸ ಮಾಡದಂತೆ ಮತ್ತು ಜಾನುವಾರುಗಳನ್ನು ಮೇಯಲು ಬಿಡದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!