ಲಕ್ಷದ್ವೀಪದಲ್ಲಿ ₹1,526 ಕೋಟಿ ಬೆಲೆಬಾಳುವ ಬರೋಬ್ಬರಿ 218 ಕೆಜಿ ಹೆರಾಯಿನ್ ವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ʼಆಪರೇಷನ್ ಖೋಜ್‌ ಬಿನ್ʼ ಹೆಸರಿನಡಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ ₹1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ಕರಾವಳಿಯಿಂದ ಹೊರಡುವ ಭಾರತೀಯ ದೋಣಿಗಳು ಅರಬ್ಬೀ ಸಮುದ್ರದ ಯಾವುದೋ ಒಂದು ಭಾಗದಲ್ಲಿ ದೊಡ್ಡ ಪ್ರಮಾಣದ ಮಾದಕ ದ್ರವ್ಯಗಳನ್ನು ಸ್ವೀಕರಿಸುತ್ತವೆ ಎಂಬ ಗುಪ್ತಚರ ವರದಿಗಳನ್ನು ಆಧರಿಸಿ ಡಿಆರ್‌ಐ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಹಲವಾರು ದಿನಗಳ ಹುಡುಕಾಟ ಮತ್ತು ಸಮುದ್ರದ ಮೇಲ್ವಿಚಾರಣೆಯ ನಂತರ, ಭಾರತದತ್ತ ಆಗಮಿಸುತ್ತಿದ್ದ “ಪ್ರಿನ್ಸ್” ಮತ್ತು “ಲಿಟಲ್ ಜೀಸಸ್” ಎಂಬ ಎರಡು ಶಂಕಿತ ದೋಣಿಗಳನ್ನು ಐಸಿಜಿ ಮತ್ತು ಡಿಆರ್‌ಐ ಅಧಿಕಾರಿಗಳು ಲಕ್ಷದ್ವೀಪ ದ್ವೀಪಗಳ ಕರಾವಳಿಯಲ್ಲಿ ಸುತ್ತುವರಿದರು.
ಬೋಟ್‌ಗಳಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಹೆರಾಯಿನ್ ಸಿಕ್ಕಿದ್ದು, ದೋಣಿಯಲ್ಲಿ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ನಂತರ ಮುಂದಿನ ಪ್ರಕ್ರಿಯೆಗಾಗಿ ದೋಣಿಗಳನ್ನು ಕೊಚ್ಚಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರದಲ್ಲಿ ಬೋಟ್‌ಗಳ ಸಂಪೂರ್ಣ ಶೋಧನೆ ನಡೆಸಲಾಗಿದ್ದು, ಹೆರಾಯಿನ್‌ನ 218 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಹೆರಾಯಿನ್‌ ಉನ್ನತ ದರ್ಜೆದ್ದಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಳೆದ ಒಂದು ತಿಂಗಳಲ್ಲಿ ಡಿಆರ್‌ಐ ಹಾಗೂ ಐಸಿಜಿ ನಡೆಸಿದ ನಾಲ್ಕನೇ ಪ್ರಮುಖ ಮಾದಕ ದ್ರವ್ಯ ಪತ್ತೆ ಪ್ರಕರಣ ಇದಾಗಿದೆ. ಡಿಆರ್‌ಐ ಏಪ್ರಿಲ್ 20 ರಂದು ಕಾಂಡ್ಲಾ ಬಂದರಿನಲ್ಲಿ 205 ಕೆಜಿ ಹೆರಾಯಿನ್, ಏಪ್ರಿಲ್ 29 ರಂದು ಪಿಪಾವಾವ್ ಬಂದರಿನಲ್ಲಿ 396 ಕೆಜಿ ಹೆರಾಯಿನ್ ಲೇಪಿತ ಮಾದಕ ದ್ರವ್ಯ, ಮೇ 10 ರಂದು ನವದೆಹಲಿಯ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ 62 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು. ಅಂತಾರಾಷ್ಟ್ರೀಯ ಅಕ್ರಮ ಮಾರುಕಟ್ಟೆಯಲ್ಲಿ ಇವುಗಳ ಒಟ್ಟು ಮೌಲ್ಯ ಸುಮಾರು ₹2,500 ಕೋಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!