ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಯಾವುದೇ ದುಷ್ಟ ಅಥವಾ ಅನೈತಿಕ ಕೃತ್ಯಗಳಲ್ಲಿ ತೊಡಗಿದರೆ, ಈ ಬಾರಿ ಅದು ಭಾರತೀಯ ನೌಕಾಪಡೆಯ ಸಂಪೂರ್ಣ ಗುಂಡಿನ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ಗೋವಾ ಕರಾವಳಿಯಲ್ಲಿ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಅಧಿಕಾರಿಗಳು ಮತ್ತು ನಾವಿಕರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ಪದೇ ಪದೇ ಮಾತುಕತೆಗೆ ಮುಂದಾಗುತ್ತಿರುವ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸುತ್ತಾ , ಮಾತುಕತೆ ನಡೆಸುವುದಾದರೆ ಅದು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಬಗ್ಗೆ ಮಾತ್ರ ಇರುತ್ತದೆ. ಪಾಕಿಸ್ತಾನ ಮಾತುಕತೆಯ ಬಗ್ಗೆ ಗಂಭೀರವಾಗಿದ್ದರೆ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ನಂತಹ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಹೇಳಿದರು.
ಈ ಇಬ್ಬರೂ ವ್ಯಕ್ತಿಗಳು ಭಾರತದ ‘ಮೋಸ್ಟ್ ವಾಂಟೆಡ್ ಟೆರರಿಸ್ಟ್’ ಪಟ್ಟಿಯಲ್ಲಿದ್ದಾರೆ. ಮಾತ್ರವಲ್ಲದೆ ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕರೂ ಆಗಿದ್ದಾರೆ ಎಂದು ಸಿಂಗ್ ಗಮನಸೆಳೆದರು.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ .ಇದು ಕೇವಲ ವಿರಾಮ, ಎಚ್ಚರಿಕೆ. ಪಾಕಿಸ್ತಾನ ಅದೇ ತಪ್ಪನ್ನು ಪುನರಾವರ್ತಿಸಿದರೆ, ಭಾರತದ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಿರುತ್ತದೆ ಎಂದು ಎಚ್ಚರಿಸಿದರು.
ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯು ಕೇವಲ ಮಿಲಿಟರಿ ತಂತ್ರವಲ್ಲ, ಬದಲಾಗಿ ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತಾ ನೀತಿಯ ಸ್ಪಷ್ಟ ಘೋಷಣೆಯಾಗಿದೆ ಎಂದು ಸಿಂಗ್ ಒತ್ತಿ ಹೇಳಿದರು.
ಇದೇ ವೇಳೆ ಭಾರತೀಯ ನೌಕಾಪಡೆಯ ಅಪ್ರತಿಮ ಶಕ್ತಿಯ ಬಗ್ಗೆಯೂ ಎಚ್ಚರಿಕೆ ನೀಡಿದ ರಕ್ಷಣಾ ಸಚಿವರು, ಆಪರೇಷನ್ ಸಿಂದೂರ್ ಸಮಯದಲ್ಲಿ ನೌಕಾಪಡೆಯು, ವಾಯುಪಡೆ ಮತ್ತು ಸೇನೆಯೊಂದಿಗೆ ಸೇರಿಕೊಂಡಿದ್ದರೆ, ಪಾಕಿಸ್ತಾನವು 1971 ಕ್ಕಿಂತ ಕೆಟ್ಟ ಪರಿಣಾಮ ಎದುರಿಸುತ್ತಿತ್ತು ಮತ್ತು ಪಾಕಿಸ್ತಾನ ನಾಲ್ಕು ಹೋಳಾಗುತ್ತಿತ್ತು ಎಂದು ಹೇಳಿದರು.