ಹೊಸದಿಗಂತ ವರದಿ, ಮಡಿಕೇರಿ:
ಭಾಗಮಂಡಲದಲ್ಲಿ ಅನಧಿಕೃತ ರೆಸಾರ್ಟ್ ತಲೆ ಎತ್ತುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಯಾವುದೇ ಕಾರಣಕ್ಕೂ ಭಾಗಮಂಡಲ-ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡದೆ ಈ ಕ್ಷೇತ್ರವನ್ನು ದೇಗುಲಗಳ ಪಟ್ಟಣವೆಂದು ಘೋಷಿಸಬೇಕು. ಒಂದು ವೇಳೆ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದರೆ ಹೋರಾಟ ಅನಿವಾರ್ಯ ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಎಚ್ಚರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು, ಭಾಗಮಂಡಲ ತಲಕಾವೇರಿ ಎನ್ನುವುದು ಕೊಡಗಿನ ಮೂಲನಿವಾಸಿಗಳ ಹಾಗೂ ಅನಾದಿಕಾಲದಿಂದಲೂ ಇಲ್ಲಿ ಬದುಕು ಕಟ್ಟಿಕೊಂಡವರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು ಕಾವೇರಿ ಕೊಡವ ಜನಾಂಗದ ಕುಲದೇವಿ ಹಾಗೂ ವಿವಿಧ ಜನಾಂಗದ ಆರಾಧ್ಯ ದೇವತೆಯಾಗಿರುತ್ತಾಳೆ. ಕಾವೇರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಇಲ್ಲಿನ ಜನರ ಧಾರ್ಮಿಕ ಭಾವನೆಯೊಂದಿಗೆ ವ್ಯಾಪಾರೋದ್ಯಮಿಗಳು ಹಾಗೂ ಆಡಳಿತ ವರ್ಗ ಆಟವಾಡುತ್ತಿದ್ದು, ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಈ ಪವಿತ್ರ ಪುಣ್ಯಕ್ಷೇತ್ರವನ್ನು ದೇಗುಲಗಳ ಪಟ್ಟಣವೆಂದು ಘೋಷಿಸಬೇಕು. ಹಾಗೆಯೇ ಈ ಭಾಗದಲ್ಲಿ ನಿರ್ಮಾಣವಾಗಿರುವ ಹೋಂಸ್ಟೇ ರೇಸಾರ್ಟ್’ಗಳಿಗೆ ಪರವಾನಗಿ ನೀಡಬಾರದು. ಒಂದು ವೇಳೆ ನೀಡಿದ್ದರೂ ಅದನ್ನು ರದ್ದು ಮಾಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಹೀಗೇ ಆದರೆ ಮುಂದಿನ ದಿನಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುವುದರೊಂದಿಗೆ, ಆಹಾರದ ಕೊರತೆ ಕೂಡಾ ಉಂಟಾಗಲಿದೆ. ಹಾಗೆಯೇ ತಲಕಾವೇರಿ ಭಾಗಮಂಡಲ ಪುಣ್ಯ ಕ್ಷೇತ್ರದಲ್ಲಿ ಅನ್ಯ ಚಟುವಟಿಕೆಗಳಿಗೆ ಅವಕಾಶ ನೀಡದೆ ಕ್ಷೇತ್ರವನ್ನು ದೇಗುಲಗಳ ಪಟ್ಟಣವೆಂದು ಘೋಷಿಸಬೇಕು ಎಂದು ಇತ್ತೀಚೆಗೆ ಸಂಘಟನೆಯೊಂದು ಒತ್ತಾಯಿಸಿದ್ದು ಕೊಡಗು ಸಂರಕ್ಷಣಾ ಒಕ್ಕೂಟ ಆ ಸಂಘಟನೆಗೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ ಎಂದು ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.