ಕೃಷಿ ಕ್ಷೇತ್ರದ ಸುಧಾರಣಾ ಯೋಜನೆಗಳಿಗೆ ವಿಪಕ್ಷಗಳ ಅಡ್ಡಗಾಲು: ಕ್ರಿಶನ್‌ಪಾಲ್ ಗುರ್ಜರ್ ಆರೋಪ

ಹೊಸದಿಗಂತ ವರದಿ, ಮಂಡ್ಯ :
ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವ ಕೇಂದ್ರ ಸರ್ಕಾರದ ಯೋಜನೆಗಳಿಗೆ ವಿಪಕ್ಷಗಳು ಅಡ್ಡಗಾಲಾಗುತ್ತಿವೆ. ಇದರ ನಡುವೆಯೂ ಮೋದಿ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕೆಗಳ ಮಂತ್ರಾಲಯದ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೊರೋನಾ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ 10 ಸಾವಿರ ರು. ಹಣ ನೀಡಲಾಗುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.50ರಷ್ಟು ಬೆಳೆ ನಷ್ಟವಾದರೆ ಮಾತ್ರ ರೈತರಿಗೆ ಪರಿಹಾರ ದೊರಕುತ್ತಿತ್ತು. ಮೋದಿ ಸರ್ಕಾರ ಬಂದ ಮೇಲೆ ಅದನ್ನು ಶೇ.33ಕ್ಕೆ ಇಳಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.
ಅಗ್ನಿಪಥ್ ಯೋಜನೆ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವುದಕ್ಕೆ ರೂಪಿಸಿರುವ ಪ್ರಬಲ ಅಸವಾಗಿದೆ. ಯುವಕರಿಗೆ ಸೈನಿಕ ತರಬೇತಿಯನ್ನು ನೀಡುವುದರೊಂದಿಗೆ ಶಿಸ್ತನ್ನು ಕಲಿಸಲಾಗುವುದು. ನಾಲ್ಕುವರ್ಷ ಆವ ಮುಗಿದ ಬಳಿಕ ಸೈನ್ಯವನ್ನು ಸೇರಬಹುದು. ಇಲ್ಲವೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯಡಿ ಉದ್ಯೋಗವಕಾಶಗಳನ್ನು ಪಡೆಯಲು ಅವಕಾಶವಿದೆ. ಅದೂ ಸಾಧ್ಯವಾಗದಿದ್ದರೆ ನಾಲ್ಕು ವರ್ಷದ ಸೈನಿಕ ತರಬೇತಿ ನೀಡಿದ ಬಳಿಕ ನೀಡಲಾಗುವ 10 ಲಕ್ಷ ರು. ಹಣದಲ್ಲಿ ಸ್ವಯಂ ಉದ್ಯೋಗಗಳನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
ಯುವಕರು ಅಡ್ಡದಾರಿ ಹಿಡಿಯದಂತೆ, ಅವರನ್ನು ದೇಶರಕ್ಷಣೆಯ ಜವಾಬ್ದಾರಿ ವಹಿಸಲಾಗುವುದು. ದೇಶಪ್ರೇಮವನ್ನು ಯುವಕರ ಮನಸ್ಸಿನಲ್ಲಿ ಬೆಳೆಸುವುದರೊಂದಿಗೆ ಸದೃಢ ರಾಷ್ಟ್ರ ನಿರ್ಮಾಣ ಮಾಡುವುದು ಮೋದಿ ಅವರ ಸಂಕಲ್ಪವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಸಾಯಿ ಕರ್ಮಚಾರಿ ಆಯೋಗದ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!