ನಾಳೆ ‘ಮಹಾ’ ಸರಕಾರಕ್ಕೆ ಅಗ್ನಿಪರೀಕ್ಷೆ: ನಮ್ಮಲ್ಲಿ 50 ಶಾಸಕರಿದ್ದಾರೆ, ಗೆದ್ದೇ ಗೆಲ್ಲುತ್ತೇವೆ ಎಂದ ಏಕನಾಥ ಶಿಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ನಾಳೆ ತೆರೆ ಬೀಳುವ ಸಾಧ್ಯತೆವಿದ್ದು, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ನಾಳೆ ಮುಹೂರ್ತ ನಿಗದಿಪಡಿಸಿದ ಬೆನ್ನಲ್ಲೇ ರಾಜಕೀಯ ಮತ್ತಷ್ಟು ಬಿರುಸು ಪಡೆದಿದೆ.
ಇತ್ತ ಸಿಎಂ ಉದ್ಧವ್​ ಠಾಕ್ರೆ ಸಂಪುಟ ಸಭೆ ಕರೆದಿದ್ದರೆ, ಕಾಂಗ್ರೆಸ್​ ಮುಂಬೈನಲ್ಲಿ ಸಭೆ ನಡೆಸುತ್ತಿದೆ. ಇದರ ನಡುವೆ ಗುವಾಹಟಿಯಲ್ಲಿರುವ ಬಂಡಾಯ ನಾಯಕ ಏಕನಾಥ ಶಿಂದೆ, ‘ನಮ್ಮಲ್ಲಿ 50 ಶಾಸಕರು ಇದ್ದು, ನಾಳಿನ ಪರೀಕ್ಷೆಯನ್ನು ಗೆದ್ದೇ ಗೆಲ್ಲುತ್ತೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಬಂಡಾಯ ಶಾಸಕರ ಬಳಗ ಗುವಾಹಟಿಯಿಂದ ಗೋವಾಕ್ಕೆ ಬರಲಿದ್ದು, ಇದರ ಮುನ್ನ ಇಲ್ಲಿನ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಏಕನಾಥ್​ ಶಿಂದೆ, ‘ನಮ್ಮೊಂದಿಗೆ 50 ಶಾಸಕರು ಇದ್ದಾರೆ. 2/3 ಬೆಂಬಲವಿದೆ. ನಾವು ವಿಶ್ವಾಸಮತದ ಬಗ್ಗೆ ಚಿಂತಿಸುವುದಿಲ್ಲ. ಇದರಲ್ಲಿ ನಾವು ಗೆಲ್ಲುತ್ತೇವೆ’ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆ ಮತ್ತು ಬಹುಮತ ಅತ್ಯಂತ ಪ್ರಮುಖ. ಇದು ನಮಗಿದೆ. ಯಾರೂ ದೇಶದ ಸಂವಿಧಾನವನ್ನು ಮೀರಿ ಹೋಗಬೇಕಾಗಿಲ್ಲ. ನಮ್ಮ ನಿಲುವು ಎಂದಿಗೂ ಮಹಾರಾಷ್ಟ್ರದ ಪ್ರಗತಿ ಮತ್ತು ಹಿಂದುತ್ವದ ಪ್ರತಿಪಾದನೆಯೇ ಆಗಿರುತ್ತದೆ. ಹಾಗಾಗಿ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ; ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಿಜೆಪಿ ಜೊತೆ ಸರ್ಕಾರ ರಚನೆ ಕುರಿತು ನಾಳೆ ನಡೆಯುವ ವಿಶ್ವಾಸಮತದ ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‌ ಮೊರೆ ಹೋದ ಶಿವಸೇನೆ
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರವನ್ನು ವಿಶ್ವಾಸಮತ ಸಾಬೀತುಪಡಿಸಲು ಗುರುವಾರಕ್ಕೆ ಮುಹೂರ್ತ ನಿಗದಿಪಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಇಂದು ಸಂಜೆ ವಿಚಾರಣೆ ನಿಗದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!