ಕೊಡಗು ಮೂಲದ ಮಾಜಿ ಸೈನಿಕರಿಗೆ ಜಿಲ್ಲೆಯಲ್ಲೇ ನಿವೇಶನ ನೀಡಿ: ಸಂಘದಿಂದ ಮನವಿ

ಹೊಸ ದಿಗಂತ ವರದಿ, ಮಡಿಕೇರಿ:

ಇತರ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೊಡಗು ಮೂಲದ ಮಾಜಿ ಸೈನಿಕರಿಗೆ ಕೊಡಗಿನಲ್ಲೇ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸೇನೆಗೆ ಸೇರುವಾಗ ನಮ್ಮ ಹುಟ್ಟೂರಿನ ವಿಳಾಸನ್ನು ನೀಡಿರುತ್ತೇವೆ. ಆದರೆ ನಿವೃತ್ತಿ ಹೊಂದಿದ ನಂತರ ಉದ್ಯೋಗಕ್ಕಾಗಿ ಕೊಡಗು ಬಿಟ್ಟು ಇತರ ಜಿಲ್ಲೆಯಲ್ಲಿ ನೆಲೆಸಿರುತ್ತೇವೆ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗದೆ, ನಿಲ್ಲಲು ನೆಲೆಯಿಲ್ಲದೆ ಕಷ್ಟಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗು ಮೂಲದ ಸುಮಾರು 2 ಸಾವಿರಕ್ಕೂ ಹೆಚ್ಚು ಮಾಜಿ ಸೈನಿಕರು ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನಲ್ಲಿ ನಿವೇಶನವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನಿವೇಶನಕ್ಕಾಗಿ ಬೆಂಗಳೂರು-ಮೈಸೂರಿನಲ್ಲಿ ಅರ್ಜಿ ಸಲ್ಲಿಸಿದರೆ, ಕೊಡಗಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ಕೊಡಗಿನಲ್ಲಿ ಮೈಸೂರಿಗೆ ತೆರಳುವಂತೆ ಹೇಳುತ್ತಾರೆ. ಇದರಿಂದ ಮಾಜಿ ಸೈನಿಕರು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದು, ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಿರಿಯ ಸೇನಾಧಿಕಾರಿಗಳು, ಶಾಸಕರು, ಸಂಸದರು ಇದ್ದರೂ ಮಾಜಿ ಸೈನಿಕರ ಬಗ್ಗೆ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಉಳಿಸಿ ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಎನ್.ಸುರೇಶ್, ಉಪಾಧ್ಯಕ್ಷ ನರಸೇಗೌಡ, ಸದಸ್ಯರಾದ ಅಶೋಕ್, ಎನ್.ಎನ್.ರವಿ ಹಾಗೂ ಟಿ.ಹೆಚ್.ಚಂದ್ರಶೇಖರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!