Thursday, March 4, 2021

Latest Posts

ಆರೋಗ್ಯಕಾಳಜಿ ಕ್ಷೇತ್ರವನ್ನು ಜನರಿಗೆ ಇನ್ನಷ್ಟು ಕೈಗೆಟಕುವ ಮಟ್ಟಕ್ಕೆ ಒಯ್ಯುವುದು ನಮ್ಮ ಮುಂದಿನ ಹೆಜ್ಜೆ: ಪ್ರಧಾನಿ ಮೋದಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾವಷ್ಟೇ ಅಲ್ಲ, ಭವಿಷ್ಯದಲ್ಲಿ ಎದುರಾಗಲಿರುವ ಎಲ್ಲಾ ಬಗೆಯ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ದೇಶದ ಆರೋಗ್ಯ ವಲಯವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೊರೋನಾ ಬಿಕ್ಕಟ್ಟನ್ನು ಎದುರಿಸುವಲ್ಲಿ ವಿಶ್ವದಲ್ಲಿ ಭಾರತದ ಆರೋಗ್ಯ ರಂಗದ ಪ್ರತಿಷ್ಠೆ ಮತ್ತು ವಿಶ್ವಾಸ ಹಲವುಪಟ್ಟು ಹೆಚ್ಚಿದೆ . ಇದೀಗ ಆರೋಗ್ಯಕಾಳಜಿ ಕ್ಷೇತ್ರವನ್ನು ಜನರಿಗೆ ಇನ್ನಷ್ಟು ಕೈಗೆಟಕುವ ಮಟ್ಟಕ್ಕೆ ಒಯ್ಯುವುದು ಮುಂದಿನ ಹೆಜ್ಜೆಯಾಗಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒತ್ತಿ ಹೇಳಿದ್ದಾರೆ.
ಆರೋಗ್ಯ ವಲಯಕ್ಕೆ ಸಂಬಂಧಿಸಿದಂತೆ ಬಜೆಟ್ ಅಂಶಗಳ ಕುರಿತು ವೆಬಿನಾರ್ ಮೂಲಕ ಮಾತನಾಡಿರುವ ಪ್ರಧಾನಿ ಮೋದಿಯವರು, ಕೋವಿಡ್‌ನಿಂದ ಎದುರಾದ ಸಂಕಷ್ಟದ ನಡುವೆಯೂ ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಿಂದೆಂದೂ ನೀಡದಿದ್ದಷ್ಟು ಅನುದಾನ ನೀಡಲಾಗಿದೆ.ಇದು ದೇಶವಾಸಿಗಳ ಆರೋಗ್ಯ ರಕ್ಷಣೆಗೆ ಕೇಂದ್ರ ಸರಕಾರ ತೋರಿರುವ ಬದ್ಧತೆಗೆ ಸಾಕ್ಷಿ ಎಂದರು. ಬಜೆಟ್ ನಲ್ಲಿ ಘೋಷಿಸಲಾಗಿರುವ ಎಲ್ಲ ಯೋಜನೆಗಳು ಏ.೧ರಿಂದ ಆರಂಭವಾಗಲಿದೆ. ಹಾಗಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಯೋಜನೆಗಳ ಜಾರಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಳೆದ ವರ್ಷದ ಕೊರೋನಾ ಅಗ್ನಿಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಎದುರಿಸಿದೆ.ವಿಶೇಷವಾಗಿ ಆರೋಗ್ಯರಂಗದಲ್ಲಿ ನಾವು ಸವಾಲನ್ನು ಎದುರಿಸಿ ಮುಂದೆ ಸಾಗಿದ್ದೇವೆ. ಲಕ್ಷಾಂತರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದು ಹರ್ಷದಾಯಕ ಸಂಗತಿ. ದೇಶದಲ್ಲಿ ಪ್ರಯೋಗಾಲಯ ಸೇರಿದಂತೆ ಆರೋಗ್ಯ ವಲಯದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯವನ್ನು ಭಾರಿ ಪ್ರಮಾಣದಲ್ಲಿ ವೃದ್ಧಿಸಲಾಗಿದ್ದು, ನಾವು ಎಂತಹುದೇ ಸವಾಲನ್ನು ಎದುರಿಸಲು ಶಕ್ತರಿದ್ದೇವೆ ಎಂಬುದನ್ನು ತೋರಿಸಿದೆ ಎಂದರು.
ಕೇವಲ ಕೊರೋನಾ ಮಾತ್ರವಲ್ಲ, ಭವಿಷ್ಯದಲ್ಲಿ ಎದುರಾಗಬಹುದಾದ ಸಾಂಕ್ರಾಮಿಕಗಳ ವಿರುದ್ಧ ಹೋರಾಡಲು ಆರೋಗ್ಯ ಕ್ಷೇತ್ರದ ಬಲವರ್ಧನೆ ಅತ್ಯಗತ್ಯವಾಗಿದೆ. ಇದಕ್ಕಾಗಿ, ವೈದ್ಯಕೀಯ ಉಪಕರಣಗಳಿಂದ ಔಷಗಳವರೆಗೆ ವೆಂಟಿಲೇಟರ್‌ನಿಂದ ವ್ಯಾಕ್ಸಿನ್ ವರೆಗೆ, ವೈದ್ಯರಿಂದ ತಜ್ಞರವರೆಗೆ ಎಲ್ಲ ರೀತಿಯಲ್ಲೂ ದೇಶವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಪ್ರಧಾನಿ ನುಡಿದರು.
ನಮ್ಮ ದೃಷ್ಟಿ ಕೇವಲ ಚಿಕಿತ್ಸೆಗೆ ಸೀಮಿತವಾಗಿಲ್ಲ . ಬದಲಿಗೆ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸುವುದು ನಮ್ಮ ಸಂಕಲ್ಪವಾಗಿದೆ.ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಪಿಎಂ ಆತ್ಮನಿರ್ಭರ ಸ್ವಾಸ್ಥ್ಯ ಭಾರತ್ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದು ದೇಶದ ಆರೋಗ್ಯ ವಲಯದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ಅವರು ನುಡಿದರು.
ಸ್ವಸ್ಥ ಭಾರತ ನಿರ್ಮಾಣಕ್ಕಾಗಿ ನಾಲ್ಕು ರಂಗಗಳಿಗೆ ಒತ್ತು
ಕೇಂದ್ರ ಸರಕಾರ ಕೋವಿಡ್ -೧೯ಬಿಕ್ಕಟ್ಟಿನ ನಡುವೆಯೂ ಸ್ವಸ್ಥ ಭಾರತದ ನಿರ್ಮಾಣಕ್ಕಾಗಿ ಆರೋಗ್ಯ ಕ್ಷೇತ್ರದ ನಾಲ್ಕು ರಂಗಗಳಲ್ಲಿ ಏಕಕಾಲಕ್ಕೆ ಸರಕಾರ ಕೆಲಸ ಮಾಡಲು ಮುಂದಾಗಿದೆ. ಅನಾರೋಗ್ಯ ತಡೆಯುವುದು ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುವುದು, ಬಡವರು ಮತ್ತು ಅತಿಬಡವರು ಸೇರಿದಂತೆ ಎಲ್ಲರಿಗೂ ಕಡಿಮೆ ಮತ್ತು ಕೈಗೆಟಕುವ ದರದಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭಿಸುವಂತೆ ನೋಡಿಕೊಳ್ಳುವುದು, ಆರೋಗ್ಯ ಮೂಲಸೌಕರ್ಯಗಳು ಮತ್ತು ಆರೋಗ್ಯರಂಗದ ವೃತ್ತಿಪರರ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದು, ಎಲ್ಲ ಅಡೆತಡೆಗಳನ್ನು ಮೀರಿ ಒಂದು ಮಿಷನ್ ಆಗಿ ಕಾರ್ಯನಿರ್ವಹಿಸಿ ದೇಶದ ಆರೋಗ್ಯರಂಗವನ್ನು ಬಲಪಡಿಸುವುದು ನಮ್ಮ ಕಾರ್ಯಯೋಜನೆಯಾಗಿದೆ ಎಂದು ಪ್ರಧಾನಿಯವರು ವಿವರಿಸಿದರು.
ಕೋವಿಡ್ ಸಂದರ್ಭ ಏನೂ ಇಲ್ಲದಿದ್ದ ಸ್ಥಿತಿಯಿಂದ ಕೆಲವೇ ತಿಂಗಳಲ್ಲಿ ದೇಶ ೨೫೦೦ಕ್ಕೂ ಅಕ ಪ್ರಯೋಗಾಲಯಗಳನ್ನು ಹೊಂದಲು ಸಾಧ್ಯವಾಯಿತು.ಕೇವಲ ಕೆಲವು ಡಜನ್ ಪರೀಕ್ಷೆ ನಡೆಸುವ ಸ್ಥಿತಿಯಿಂದ ಇಂದು ೨೧ಕೋಟಿ ಮಂದಿಯ ಪರೀಕ್ಷೆ ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಭಾರತವಿಂದು ಸಂಶೋಧನೆಯಿಂದ ಪರೀಕ್ಷೆ ಮತ್ತು ಚಿಕಿತ್ಸೆ ವರೆಗೆ ವಿಶ್ವಮಟ್ಟದ ಸಾಧನೆ ಗೈದಿದೆ.೧೫ನೇ ಹಣಕಾಸು ಆಯೋಗದ ಶಿಫಾರಸಿನಂತೆ ಸ್ಥಳೀಯ ಸಂಸ್ಥೆಗಳು ಆರೋಗ್ಯ ಸೇವೆಗಾಗಿ ೭೦ಸಾವಿರ ಕೋ.ರೂ.ಗಳನ್ನು ಪಡೆಯಲಿವೆ ಎಂದು ಮೋದಿ ಪ್ರಕಟಿಸಿದರು.
ವೈದ್ಯಕೀಯ ಶಿಕ್ಷಣಕ್ಕಾಗಿ ಇನ್ನು ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ
ಇಂದು ಭಾರತ ಆರೋಗ್ಯರಂಗದಲ್ಲಿ ಮಾಡಿರುವ ಸಾಧನೆ ಇಡಿ ವಿಶ್ವವನ್ನೇ ಬೆರಗಾಗುವಂತೆ ಮಾಡಿದೆ.ಭಾರತದ ಕೋವಿಡ್ ಲಸಿಕೆ ಇಡಿ ವಿಶ್ವದ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿದ್ದು, ಭಾರತದ ಆರೋಗ್ಯರಂಗದ ಪ್ರತಿಷ್ಠೆ ಮತ್ತು ವಿಶ್ವಾಸಾರ್ಹತೆಯನ್ನು ನೂರ್ಮಡಿಗೊಳಿಸಿದೆ . ಇದರಿಂದಾಗಿ ಭಾರತೀಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯೆಡೆಗೆ ಇಡಿ ವಿಶ್ವದ ಗಮನ ಹರಿಯಲಿದ್ದು, ಇದು ಭಾರೀ ಪ್ರಮಾಣದಲ್ಲಿ ವಿದೇಶಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತದತ್ತ ಮುಖಮಾಡಲಿದ್ದಾರೆ. ಹಾಗೆಯೇ ಭಾರತೀಯ ವೆಂಟಿಲೇಟರ್ ಮತ್ತು ಇತರ ವೈದ್ಯಕೀಯ ಸಾಧನಗಳಿಗೆ ಜಾಗತಿಕ ಬೇಡಿಕೆ ಹೆಚ್ಚುವಂತಾಗಿದೆ ಎಂದು ಪ್ರಧಾನಿ ಹೆಮ್ಮೆಯಿಂದ ನುಡಿದರು.೨೦೨೫ಕ್ಕೆ ಭಾರತದಿಂದ ಕ್ಷಯರೋಗವನ್ನು ನಿರ್ಮೂಲನೆಗೊಳಿಸುವ ಸಂಕಲ್ಪವನ್ನೂ ಅವರು ಘೋಷಿಸಿದರು.
ಆಯುಷ್‌ಗೆ ಶ್ಲಾಘನೆ
ಆಯುಷ್ ಕ್ಷೇತ್ರದ ಮೂಲಸೌಕರ್ಯಗಳ ಹೆಚ್ಚಳದಿಂದಾಗಿ ಜನತೆಯ ರೋಗನಿರೋಧಕ ಶಕ್ತಿ ಹೆಚ್ಚಾಗಿ ವೈಜ್ಞಾನಿಕ ಸಂಶೋಧನೆಗೂ ಒತ್ತು ಲಭಿಸಿದ ಬಗೆಗೂ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.ವಿಶ್ವವೇ ಇಂದು ಪಾರಂಪರಿಕ ವೈದ್ಯಕೀಯ ಚಿಕಿತ್ಸೆಯ ಮಹತ್ವವನ್ನೂ ಅರಿಯುವಂತೆ ಮಾಡಿದೆ ಎಂದರು.
ಉ.ಪ್ರ.ದ ನಿದರ್ಶನ
ಈ ಹಿಂದೆ ಉತ್ತರಪ್ರದೇಶ ಸೇರಿದಂತೆ ಪೂರ್ವಾಂಚಲ ರಾಜ್ಯಗಳಲ್ಲಿ ಮೆದುಳು ಜ್ವರದಿಂದ ಸಾವಿರಾರು ಮಂದಿ ಮಕ್ಕಳು ಬಲಿಯಾಗುತ್ತಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಒಂದು ಬಾರಿ ಚರ್ಚೆಯಾಗುತ್ತಿದ್ದಾಗ ಯೋಗಿ ಆದಿತ್ಯನಾಥ್ ಅವರು ಪರಿಸ್ಥಿತಿಯ ತೀವ್ರತೆ ಬಗ್ಗೆ ಗಂಭೀರ ಧ್ವನಿ ಎತ್ತಿದ್ದರು. ಆದರೆ ಅವರು ಉ.ಪ್ರ.ಮುಖ್ಯಮಂತ್ರಿಯಾದ ಬಳಿಕ ಈ ಮೆದುಳು ಜ್ವರದಿಂದ ಸಾವಿಗೀಡಾಗುವ ಪ್ರಮಾಣ ತೀವ್ರ ಇಳಿಕೆಯಾಗಿರುವುದನ್ನು ಮೋದಿ ಬೊಟ್ಟು ಮಾಡಿದರು. ಈ ಬಾರಿಯ ಬಜೆಟ್‌ನಲ್ಲಿ ಮೋದಿ ಸರಕಾರ ಆರೋಗ್ಯವಲಯಕ್ಕೆ ೨,೨೩,೮೪೬ಕೋ.ರೂ.ಗಳನ್ನು ಒದಗಿಸಿ ವಿಶ್ವದ ಗಮನ ಸೆಳೆದಿರುವುದು ಇಲ್ಲಿ ಉಲ್ಲೇಖನೀಯ.

 

 

 

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!