Sunday, August 14, 2022

Latest Posts

ಏಕಾಏಕಿ ಹಿಂದು ದೇವಾಲಯಗಳ ತೆರವು: ಬಿಜೆಪಿ, ಹಿಂದು ಸಂಘಟನೆಗಳಿoದ ಪ್ರತಿಭಟನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರು ಹಾಗೂ ಜಿಲ್ಲೆಯಲ್ಲಿರುವ ಹಿಂದು ದೇವಾಲಯಗಳನ್ನು ಜಿಲ್ಲಾಡಳಿತ ಏಕಾಏಕಿ ತೆರವುಗೊಳಿಸುತ್ತಿರುವುದನ್ನು ವಿರೋಧಿಸಿ, ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಮುಖಂಡರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಈಗಾಗಲೇ ತೆರವುಗೊಳಿಸುವಂತೆ ಸೂಚಿಸಿರುವ ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ದೇವಸ್ಥಾನದ ಮುಂಭಾಗ ಜಮಾಯಿಸಿ, ಕೇವಲ ಹಿಂದು ದೇವಾಲಯಗಳನ್ನು ಮಾತ್ರ ತೆರವುಗೊಳಿಸುತ್ತಿರುವ ಜಿಲ್ಲಾಡಳಿತ, ಅಧಿಕಾರಿಗಳ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಹಿಂದು ದೇವಸ್ಥಾನಗಳ ತೆರವು ಕಾರ್ಯಚರಣೆಯನ್ನು ನಿಲ್ಲಿಸಬೇಕು, ಈಗಾಗಲೇ ತೆರವುಗೊಳಿಸಿರುವ ನೂರಾರು ವರ್ಷಗಳ ಇತಿಹಾಸವಿದ್ದ ದೇವಸ್ಥಾನಗಳಿದ್ದ ಜಾಗದಲ್ಲಿ ಅದೇ ಮಾದರಿಯಲ್ಲಿ ದೇವಸ್ಥಾನವನ್ನು ನಿರ್ಮಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಳಿಕ ಸ್ಥಳದಲ್ಲಿಯೇ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಅಧಿಕಾರಿಗಳು ಕಳ್ಳರಂತೆ ಬಂದು ಹಿಂದು ದೇವಾಲಯಗಳನ್ನು ಒಡೆದು ಹಾಕುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಾದ್ಯಂತ 90 ಕ್ಕಿಂತ ಹೆಚ್ಚು ದೇವಾಲಯಗಳಿವೆ. ಅವುಗಳನ್ನ ಕೆಡವುದರಿಂದ ಜನರ ಭಾವನೆಗೆ ಧಕ್ಕೆಯಾಗುತ್ತೆ. ನಾನು ಕೆಡಿಪಿ ಸಭೆಯಲ್ಲಿ ಇದನ್ನೆ ಚರ್ಚೆ ಮಾಡಿದ್ದೆನೆ. ನಮ್ಮ ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡ್ತಿರಾ..? ದರ್ಗಾ, ಚರ್ಚ್ಗಳು ಯಾಕೆ ತೆರವು ಮಾಡಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಕಿಡಿಕಾರಿದರು.
ಮಧ್ಯರಾತ್ರಿಯಲ್ಲಿ ಕಳ್ಳ ರೀತಿ ಬಂದು ಹಿಂದೂ ದೇವಾಲಯಗಳನ್ನ ಕೆಡವುತ್ತಿದ್ದಿರಾ. ಕಳ್ಳರು ದರೋಡೆಕೋರರು ಜನರಿಲ್ಲದೆ ವೇಳೆ ಮಾಡ್ತಾರೆ. ಅದೇ ರೀತಿ  ನಮ್ಮ ದೇವಸ್ಥಾನಗಳನ್ನ ಕೆಡವುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಹರಿಹಾಯ್ದರು.
ಮಾತೆತ್ತಿದ್ದರೆ ಸುಪ್ರೀಂಕೋರ್ಟ್ ಆರ್ಡರ್ ಅಂತಾರೆ. ನಮ್ಮ ಹತ್ತಿರನೂ ಸುಪ್ರೀಂ ಕೋರ್ಟ್ ಆರ್ಡರ್ ಇದೆ. ಸುಪ್ರೀಂ ಕೋರ್ಟ್ 2009 ರಲ್ಲಿ ಮಧ್ಯಂತರ ಆದೇಶ ನೀಡಿದೆ. ಎಂಟು ವಾರದೊಳಗೆ ತೀರ್ಪು ಅನುಷ್ಠಾನದ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ. 2009 ಕ್ಕೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಡಿದ್ದೀರಾ, ಇದರಿಂದ ರಾಜು ಮರ್ಡರ್ ಆಯಿತು ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊoಡು ಮುಂಜಾನೆ ಅಧಿಕಾರಿಗಳು ಕಳ್ಳರಂತೆ ಬಂದು ಜೆಸಿಬಿ, ಹಿಟಾಜಿ ಮೂಲಕ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದಾರೆ. ಎಲ್ಲರೂ ಗಾಢ ನಿದ್ರೆಯಲ್ಲಿರುವ ಸಮಯವನ್ನು ಕಳ್ಳರು ಕಳ್ಳತನಕ್ಕೆ ಪ್ರಶಸ್ತ ಎಂದುಕೊಳ್ಳುತ್ತಾರೆ. ಅವರಂತೆ ಅಧಿಕಾರಿಗಳು ಮುಂಜಾನೆ ಬಂದು ದೇಗುಲಗಳನ್ನು ತೆರವುಗೊಳಿಸುತ್ತಿದ್ದಾರೆ. ಇದು ಸರಿಯಲ್ಲ, ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ದೇವಸ್ಥಾನಗಳನ್ನು ಉಳಿಸಿ ಜನಾಂದೋಲನವನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಅನಧಿಕೃತವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳ ತೆರವಿಗೆ ಸಂಬoಧಿಸಿದoತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಮೈಸೂರಿಗೆ ಮಾತ್ರ ಸೀಮಿತಗೊಳಿಸಿ ಮಾತನಾಡುತ್ತಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತನಾಡುತ್ತಿದ್ದೇನೆ. ಯಾವುದೇ ಪೂರ್ವಾಪರಗಳನ್ನು ಪರಿಶೀಲಿಸದೇ ಏಕಾಏಕಿ ದೇಗುಲಗಳನ್ನು ನೆಲಸಮಗೊಳಿಸುತ್ತಿರುವುದು ಸರಿಯಲ್ಲ. ಇಂತಹ ಘಟನೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ. ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಮುನ್ನಾ ಮೊದಲು ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರಾರ್ಥನಾ ಮಂದಿರವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೇ? ಅಥವಾ ಸ್ಥಳಾಂತರ ಮಾಡಲು ಸಾಧ್ಯವಿದೆಯೇ? ಎಂಬೆಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಅಂತಹ ಪ್ರಾರ್ಥನಾ ಮಂದಿರಗಳನ್ನು ಮಾತ್ರ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತೆರವುಗೊಳಿಸಬೇಕೇ ಹೊರತು ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಬಾರದು ಎಂದು ಹೇಳಿದರು.
ಈ ವೇಳೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ಸೋಮಸುಂದರ್, ಮೈಸೂರು ಮಹಾನಗರಪಾಲಿಕೆಯ ಮೇಯರ್ ಸುನಂದಾಪಾಲನೇತ್ರ, ಹಿಂದು ಸಂಘಟನೆಗಳ ಒಕ್ಕೂಟದ ಮೈ.ಕಾ.ಪ್ರೇಮ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss